ADVERTISEMENT

`ಅಧಿಕಾರಿಗಳ ವರ್ಗ: ಮಾನವ- ಪ್ರಾಣಿ ಸಂಘರ್ಷಕ್ಕೆ ಕಾರಣ'

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರಿಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಪದೇಪದೇ ವರ್ಗಾವಣೆ ಮಾಡುತ್ತಿರುವುದು ಈ ಭಾಗದ ಮಾನವ- ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿದೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಸಮೀಪದಲ್ಲೇ ಇರುವ ರಾಷ್ಟ್ರೀಯ ಉದ್ಯಾನಕ್ಕೆ 2011ರಿಂದ ವ್ಯವಸ್ಥಿತವಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ನೇಮಿಸಿಲ್ಲ. ಬದಲಿಗೆ ಅಧಿಕಾರಿಗಳನ್ನು ಪದೇಪದೇ ವರ್ಗಾಯಿಸಲಾಗುತ್ತಿದೆ. ಬಿಳಿಗಿರಿರಂಗನ ದೇವಾಲಯ ವನ್ಯಜೀವಿ ಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಬಿಸ್ವಜಿತ್ ಮಿಶ್ರಾ ಅವರನ್ನು ಕೆಲ ವರ್ಷಗಳ ಹಿಂದೆ ಬನ್ನೇರುಘಟ್ಟ ರಾಷ್ಟ್ರಿಯ ಉದ್ಯಾನಕ್ಕೆ ನೇಮಿಸಲಾಗಿತ್ತು.

ಆದರೆ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಯು.ವಿ.ಸಿಂಗ್ ಅವರೊಂದಿಗೆ ಮಿಶ್ರಾ ಅವರ ಹೆಸರೂ ಕೇಳಿಬಂದ ಕಾರಣಕ್ಕೆ ಅವರನ್ನು ಬಿಳಿಗಿರಿರಂಗನ ದೇವಾಲಯ ವನ್ಯಜೀವಿ ಧಾಮದಿಂದ ಬನ್ನೇರುಘಟ್ಟಕ್ಕೆ ವರ್ಗಾಯಿಸಲಾಗಿತ್ತು.
ವರ್ಷದ ಹಿಂದೆ ಬನ್ನೇರುಘಟ್ಟದಿಂದ ಮಿಶ್ರಾ ಅವರನ್ನು ವರ್ಗಾಯಿಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ಅವರಿಗೆ ರಾಷ್ಟ್ರೀಯ ಉದ್ಯಾನದ ಉಸ್ತುವಾರಿ ವಹಿಸಲಾಗಿತ್ತು. ಆನಂತರ ಆರ್.ಗೋಕುಲ್ ಅವರನ್ನು ಬನ್ನೇರುಘಟ್ಟದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಿಸಲಾಗಿತ್ತು.

2012ರಲ್ಲಿ ಕೆಲ ತಿಂಗಳು ಬನೇರುಘಟ್ಟದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ದೇವರಾಜ್ ಅವರನ್ನು ನಂತರ ಬನ್ನೇರುಘಟ್ಟ ಜೈವಿಕ ಉದ್ಯಾನದ ನಿರ್ದೇಶಕರನ್ನಾಗಿ ಸರ್ಕಾರ ನೇಮಿಸಿತು. ಆನಂತರ ರಾಮನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಕತ್‌ಸಿಂಗ್ ರಣಾವತ್ ಅವರಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಉಸ್ತುವಾರಿ ವಹಿಸಲಾಗಿದೆ.

`ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕಿಂತ ಜೈವಿಕ ಉದ್ಯಾನಕ್ಕೆ ಹೋಗಲು ಅಧಿಕಾರಿಗಳ ನಡುವೆಯೇ ಸ್ಪರ್ಧೆ ಇದೆ. ಹೀಗಾಗಿ ರಾಷ್ಟ್ರೀಯ ಉದ್ಯಾನಕ್ಕೆ ನೇಮಕವಾಗುವ ಅಧಿಕಾರಿಗಳು ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಅಲ್ಲಿರುವುದಿಲ್ಲ' ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.

ಆಗಾಗ ಅಧಿಕಾರಿಗಳು ಬದಲಾಗುವ ಕಾರಣದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ ಆನೆಗಳು ದಾಟದಂಥ ಕಾಲುವೆ, ಸೋಲಾರ್ ವಿದ್ಯುತ್‌ನ ಬೇಲಿಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಅಲ್ಲದೇ ರಾಷ್ಟ್ರೀಯ ಉದ್ಯಾನ ಸಮೀಪದ ಶಿವನಹಳ್ಳಿ ಸುತ್ತಮುತ್ತ ಕಲ್ಲು ಗಣಿಗಾರಿಕೆ ಹೆಚ್ಚಾಗಿದೆ. ಇದರಿಂದ ಪ್ರಾಣಿಗಳ ಆವಾಸ ಹಾಗೂ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ಸಿಂಗ್, `ಅಧಿಕಾರಿಗಳ ನೇಮಕಕ್ಕೂ ಅರಣ್ಯ ನಿರ್ವಹಣೆ ಹಾಗೂ ಮಾನವ- ಪ್ರಾಣಿ ಸಂಘರ್ಷಕ್ಕೂ ಸಂಬಂಧವಿಲ್ಲ. ಶೀರ್ಘದಲ್ಲೇ ದಕ್ಷ ಅಧಿಕಾರಿಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಿಸಲಾಗುವುದು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.