ADVERTISEMENT

ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು ಕಾರ್ಯಾಚರಣೆ ತೀವ್ರ:ಆಯುಕ್ತ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 18:40 IST
Last Updated 21 ಆಗಸ್ಟ್ 2012, 18:40 IST

ಬೆಂಗಳೂರು: ನಗರದ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಮತ್ತು ಕಟೌಟ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಕೆ. ಶಂಕರಲಿಂಗೇಗೌಡ ತಿಳಿಸಿದ್ದಾರೆ.

ಸಾರ್ವಜನಿಕ ಜಾಗಗಳಲ್ಲಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಗೂ ಕಟೌಟ್‌ಗಳನ್ನು ತೆರವುಗೊಳಿಸುವುದರ ಜತೆಗೆ, ಅವುಗಳನ್ನು ಅಳವಡಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ದಂಡ ವಿಧಿಸಲು ಹೈಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲ ವಲಯಗಳಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸುವ ಮೂಲಕ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ನಡುವೆ, ಪಾಲಿಕೆಯ ಪೂರ್ವ ವಲಯದ ಎಚ್.ಬಿ.ಆರ್. ಬಡಾವಣೆ ಉಪ ವಿಭಾಗದಲ್ಲಿ ಅನಧಿಕೃತ ಬಂಟಿಂಗ್ಸ್, ಬ್ಯಾನರ್ ಹಾಗೂ ಇತರ ಜಾಹೀರಾತು ಫಲಕಗಳನ್ನು ತೆರವುಗೊಳಿಸಿ ವಿಭಾಗದ ಕಚೇರಿಯಲ್ಲಿ ಸಂಗ್ರಹಿಸಿಡಲಾಗಿದೆ.  8-8 ಅಡಿ ಅಳತೆಯ 30, 6-8 ಅಡಿ ಅಳತೆಯ 26, 4-3 ಅಡಿ ಅಳತೆಯ 45, 3-3 ಅಡಿ ಅಳತೆಯ 60 ಫಲಕಗಳನ್ನು ಹಾಗೂ 6-2 ಅಡಿ ಅಳತೆಯ ಸುಮಾರು 40 ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಎಚ್‌ಬಿಆರ್ ಲೇಔಟ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ಅನಧಿಕೃತ ಶೆಡ್ ನಿರ್ಮಾಣ: ಕಲ್ಯಾಣನಗರದ (ವಾರ್ಡ್ ನಂ. 127) 3ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆಯಲ್ಲಿ ಸುಮಾರು 8- 10 ವರ್ಷಗಳ ಹಿಂದೆ ನಿರ್ಮಿಸಿರುವ ಅನಧಿಕೃತ ಶೆಡ್ ಅನ್ನು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ತೆರವುಗೊಳಿಸಿದೆ.

ಈ ಸಂಬಂಧ 1ನೇ ಅಡ್ಡರಸ್ತೆಯ ನಿವಾಸಿಗಳು ನೀಡಿದ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿ ಅನಧಿಕೃತ ಶೆಡ್ ತೆರವುಗೊಳಿಸಲಾಗಿದೆ ಎಂದು ಚಂದ್ರಾ ಬಡಾವಣೆಯ ಸಹಾಯಕ ನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.