ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್, ಫ್ಲೆಕ್ಸ್, ಪೋಸ್ಟರ್ ಇತ್ಯಾದಿಗಳನ್ನು ತೆರವುಗೊಳಿಸಲು ಪಾಲಿಕೆ ಆಯುಕ್ತರಿಗೆ ಇನ್ನು ನಾಲ್ಕೇ ವಾರಗಳ ಗಡುವು. ಇಲ್ಲದಿದ್ದರೆ ಕಾದಿದೆ ಕಠಿಣ ಶಿಕ್ಷೆ...!
ಇದು ಹೈಕೋರ್ಟ್ ಆದೇಶ. `ನಿಮಗೆ ನಾಲ್ಕು ವಾರಗಳ ಗಡುವು ನೀಡುತ್ತೇವೆ. ಇವುಗಳನ್ನು ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಿ. ನಂತರ ಈ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ. ಬಳಿಕ ಸ್ಥಳಗಳ ಪರಿಶೀಲನೆ ನಡೆಸಲಾಗುವುದು.
ಪ್ರಮಾಣ ಪತ್ರದಲ್ಲಿ ಸಲ್ಲಿಸಿರುವ ಅಂಶಗಳು ಸತ್ಯಕ್ಕೆ ದೂರವಾದುದು ಎಂದು ನಮ್ಮ ಗಮನಕ್ಕೆ ಬಂದರೆ ನಿಮ್ಮ ವಿರುದ್ಧವೇ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ~ ಎಂಬ ಎಚ್ಚರಿಕೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೀಡಿದೆ.
ಬ್ಯಾನರ್, ಫ್ಲೆಕ್ಸ್ ಇತ್ಯಾದಿಗಳ ವಿರುದ್ಧ ಜ್ಞಾನಪ್ರಕಾಶ್ ಎನ್ನುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ಈ ರೀತಿಯ ಪೋಸ್ಟರ್‌ಗಳಿಂದ ನಗರದ ಅಂದ ಹಾಳಾಗುತ್ತಿದೆ. ಈ ಕುರಿತು ಸಂಬಂಧಿತರಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎನ್ನುವುದು ಅವರ ವಾದ.
ಇವುಗಳನ್ನು ತೆರವುಗೊಳಿಸಿ, ತೆಗೆದುಕೊಂಡಿರುವ ಕ್ರಮಗಳ ಮಾಹಿತಿ ನೀಡುವಂತೆ ಈ ಹಿಂದೆ ಪೀಠ ನಿರ್ದೇಶಿಸಿತ್ತು.`ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ~ ಎಂಬ ಪ್ರಮಾಣಪತ್ರವನ್ನು ಆಯುಕ್ತರು ಗುರುವಾರ ಕೋರ್ಟ್‌ಗೆ ಸಲ್ಲಿಸಿದರು.
ನ್ಯಾಯಮೂರ್ತಿಗಳು ಕಿಡಿ: `ಯಾವುದೇ ರಸ್ತೆಯಲ್ಲಿ ಓಡಾಡಿದರೂ ಈ ಪ್ರಮಾಣ ಪತ್ರದ ನಿಜ ಸ್ವರೂಪವು ನಮಗೆ ಕಂಡು ಬರುತ್ತಿದೆ. ಇಂತಹ ಪ್ರಮಾಣ ಪತ್ರ ನಮಗೆ ಬೇಡ. ಸೆಪ್ಟೆಂಬರ್ 27ರ ಒಳಗೆ ಮತ್ತೊಮ್ಮೆ ಪ್ರಮಾಣ ಪತ್ರ ಸಲ್ಲಿಸಿ ವಾಸ್ತವ ಸ್ಥಿತಿ ತಿಳಿಸಬೇಕು. ಅದು ಸತ್ಯಾಂಶದಿಂದ ಕೂಡಿರಬೇಕು~ ಎಂದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಅಂದಿಗೆ ಮುಂದೂಡಿದರು.
`ಉನ್ನತ ಮಟ್ಟದ ಸಭೆ ಸೇರಿ~
ನಾಲ್ಕು ದಶಕಗಳ ಹಿಂದೆ ಬೀದರ್ ಜಿಲ್ಲೆಯ ಕಾರಂಜಾ ಹಿನ್ನೀರಿನಲ್ಲಿ ಮುಳುಗಡೆಯಾದ ಕುಟುಂಬಗಳಿಗೆ ಪರಿಹಾರ ನೀಡುವ ಸಂಬಂಧ ಉನ್ನತ ಮಟ್ಟದ ಸಮಿತಿಯ ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ಗುರುವಾರ ನಿರ್ದೇಶಿಸಿದೆ.
ಒಂದು ವೇಳೆ ಈಗಾಗಲೇ ಸಭೆ ಸೇರಿದ್ದರೆ ಆ ಬಗ್ಗೆ ವರದಿ ನೀಡುವಂತೆ, ಸಭೆ ಸೇರಿಲ್ಲದ ಸಂದರ್ಭದಲ್ಲಿ ನಾಲ್ಕು ವಾರಗಳಲ್ಲಿ ಸಭೆ ಸೇರುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸೂಚಿಸಿದೆ.
`1971-72ರಲ್ಲಿ ಸಾವಿರಾರು ಎಕರೆ ಜಮೀನು ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗಿವೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜಮೀನು ಕಳೆದುಕೊಂಡಿರುವವರಿಗೆ ಜಮೀನಿನ ಗುಣಮಟ್ಟಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ 6 ಸಾವಿರದಿಂದ ಹನ್ನೆರಡು ಸಾವಿರ ರೂಪಾಯಿ ನೀಡುವುದಾಗಿ ಭರವಸೆ ನೀಡಲಾಗಿತ್ತು. ಇದುವರೆಗೆ ಭರವಸೆ ಈಡೇರಿಲ್ಲ ಎಂದು ದೂರಿ ಸಂತ್ರಸ್ತರು 2007ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ.
`ಕೆಎಟಿ ಕೂಡ ಪ್ರತಿವಾದಿ~
ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ (ಕೆಎಟಿ) ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಮಂಡಳಿಯನ್ನು ಪ್ರತಿವಾದಿಯನ್ನಾಗಿಸಬಹುದು ಎಂದು ಹೈಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ.
ನ್ಯಾಯಮಂಡಳಿಯ ಅಧ್ಯಕ್ಷರ ಬದಲು ರಿಜಿಸ್ಟ್ರಾರ್ ಅವರನ್ನು ಪ್ರತಿವಾದಿಯಾಗಿಸಬಹುದು ಎಂದು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ತಿಳಿಸಿದ್ದಾರೆ. ಇದರಿಂದ ಕೆಎಟಿಯನ್ನು ಪ್ರತಿವಾದಿಯಾಗಿಸಬಹುದೆ, ಬೇಡವೆ ಎಂಬ ಬಗ್ಗೆ ಇದ್ದ ಗೊಂದಲಕ್ಕೆ ನ್ಯಾಯಮೂರ್ತಿಗಳು ತೆರೆ ಎಳೆದಿದ್ದಾರೆ.
ಎಸ್ಸಿ ಪಟ್ಟಿಯಿಂದ ಹೊರಕ್ಕೆ: ಮನವಿ ಪರಿಗಣಿಸಿ
ಲಂಬಾಣಿ, ಲಮ್ಮಾಣಿ, ಬಂಜಾರ, ಸುಕಾಲಿ, ಸುಗಾಲಿ, ಭೋವಿ, ಕೊರಾಚ, ವಡ್ಡರ್ ಸೇರಿದಂತೆ ಇತರ ಸಮುದಾಯಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಬಿಡಲು ಆದೇಶಿಸುವಂತೆ ಕೋರಿ `ಕರ್ನಾಟಕ ರಾಜ್ಯ ಅಸ್ಪೃಶ್ಯರ ಸಮಾಜ ಮಹಾಸಭೆ~ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಗುರುವಾರ ನಿರ್ದೇಶಿಸಿದೆ.
ಈ ಎಲ್ಲ ಜಾತಿಗಳ ಜನರನ್ನು ಪರಿಶಿಷ್ಟ ಜಾತಿಗೆ ಸೇರಿಸಿ 2002ರಲ್ಲಿ ಮಾಡಲಾದ ತಿದ್ದುಪಡಿಯ ರದ್ದತಿಗೆ ಕೋರಿ ಮಹಾಸಭಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.
`ಈ ಜನರು ಸಾಮಾಜಿಕವಾಗಿ ತೊಂದರೆಗೆ ಒಳಗಾಗಿಲ್ಲ. ಪರಿಶಿಷ್ಟ ಜಾತಿಗೆ ಸೇರುವ ಅರ್ಹತೆಯೂ ಅವರಿಗೆ ಇಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅವರನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರಿಂದ ಹಲವು ಸೌಲಭ್ಯ ಪಡೆದುಕೊಳ್ಳುವಲ್ಲಿ ನಿಜವಾದ ಫಲಾನುಭವಿಗಳಿಗೆ ಅನ್ಯಾಯ ಆಗಿದೆ~ ಎಂದು ಅರ್ಜಿದಾರರು ದೂರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.