ADVERTISEMENT

ಅನಾಥ ಮಕ್ಕಳ ಶಿಕ್ಷಣ: ದೇಣಿಗೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ಬೆಂಗಳೂರು: ಬಿಗ್ ಬಜಾರ್‌ನ ರಾಜಾಜಿನಗರದ ಹೊಸ ಫ್ಯಾಮಿಲಿ ಸೆಂಟರ್‌ನ ಪ್ರಾರಂಭೋತ್ಸವದ ಅಂಗವಾಗಿ ಅನಾಥ ಮಕ್ಕಳಿಗೆ ದೇಣಿಗೆ ನೀಡಲು ಮಹಾತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಟ ಶಿವರಾಜ್‌ಕುಮಾರ್ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿದರು.

53 ಅನಾಥ ಮಕ್ಕಳಿಗೆ ವಸತಿ ಹಾಗೂ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜಾಜಿನಗರದ ಹಲವು ಸ್ಥಳೀಯರು  ನೆರವು ನೀಡಿದರು. ದೇಣಿಗೆ ನೀಡ ಬಯಸುವ ಎಲ್ಲರಿಗೂ ಬಾಗಿಲು ತೆರೆದಿದೆ. ನಗದು ಅಥವಾ ಇತರೆ ಯಾವುದೇರೂಪದಲ್ಲಿ ನೆರವು ನೀಡಬಹುದು.

`ಮನವ~ ಸ್ವಯಂಸೇವಾ ಸಂಸ್ಥೆಯ 15ಕ್ಕೂ ಹೆಚ್ಚು ಮಕ್ಕಳು ಮಹಾತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಕ್ಕಡಿಯ ಒಂದು ಭಾಗದಲ್ಲಿ ಪ್ರತಿ ಮಗುವನ್ನು ಕೂರಿಸಿ, ಇನ್ನೊಂದು ಭಾಗದಲ್ಲಿ ಸಮ ತೂಕದ ದೇಣಿಗೆ ಇಟ್ಟು ತೂಗಲಾಯಿತು. ಶಿವರಾಜ್‌ಕುಮಾರ್ ತಾವೇ ಮೊದಲು ದೇಣಿಗೆ ನೀಡಿ ಇತರರನ್ನು ನೆರವು ನೀಡಲು ಉತ್ತೇಜಿಸಿದರು.

`ಮಹಾತುಲಾಭಾರ ಅನಾಥ ಮಕ್ಕಳಿಗೆ ಹಣ ಸಂಗ್ರಹಿಸಲು ಭಿನ್ನ ವೇದಿಕೆ. ಈ ಕಾರ್ಯಕ್ರಮದಲ್ಲಿ ಬಿಗ್‌ಬಜಾರ್‌ನೊಂದಿಗೆ ಕೈಜೋಡಿಸಲು ಹೆಮ್ಮೆಯಾಗುತ್ತಿದೆ~ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಮಹಾತುಲಾಭಾರದಲ್ಲಿ ಪಾಲ್ಗೊಳ್ಳಲು 20 ಸಾವಿರಕ್ಕೂ ಅಧಿಕ ನಿವಾಸಿಗಳನ್ನು ಕೋರಲಾಗಿತ್ತು. ಮೊದಲ 100 ದೇಣಿಗೆಗಳನ್ನು ನಟ ಶಿವರಾಜ್‌ಕುಮಾರ್‌ಸ್ವೀಕರಿಸಿದರು.

ದೇಣಿಗೆ ನೀಡಿದವರಿಗೆ ಬಿಗ್‌ಬಜಾರ್ ವತಿಯಿಂದ ಶೀಘ್ರ ಕೃತಜ್ಞತಾ ಪತ್ರ ಸಲ್ಲಿಸಲಾಗುವುದು ಎಂದು ಬಿಗ್‌ಬಜಾರ್ ದಕ್ಷಿಣ ವಲಯದ ಮುಖ್ಯಸ್ಥ ವೆಂಕಟೇಶ್ವರ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.