ADVERTISEMENT

ಅನುಕಂಪ ಬೇಡ, ಅವಕಾಶ ಕೊಡಿ: ಕ್ರೀಡಾಪಟು ಗಿರೀಶ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 19:43 IST
Last Updated 4 ಡಿಸೆಂಬರ್ 2012, 19:43 IST
ನಗರದ ಅಪೋಲೊ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟು ಗಿರೀಶ್ ಹೊಸನಗರ ನಾಗರಾಜೇಗೌಡ ಅವರನ್ನು ಅಪೋಲೊ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಮಾಪತಿ ಪನ್ಯಾಲ ಸನ್ಮಾನಿಸಿದರು
ನಗರದ ಅಪೋಲೊ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟು ಗಿರೀಶ್ ಹೊಸನಗರ ನಾಗರಾಜೇಗೌಡ ಅವರನ್ನು ಅಪೋಲೊ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಮಾಪತಿ ಪನ್ಯಾಲ ಸನ್ಮಾನಿಸಿದರು   

ಬೆಂಗಳೂರು: `ಅಂಗವಿಕಲರ ಬಗ್ಗೆ ಅನುಕಂಪ ಪಡುವುದು ಅಗತ್ಯ ಇಲ್ಲ. ಬದಲಾಗಿ ಸಾಧನೆ ಮಾಡಲು ಅವರಿಗೆ ಅವಕಾಶ ಕಲ್ಪಿಸಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಅಂಗವಿಕಲರನ್ನು ಇತರ ವ್ಯಕ್ತಿಗಳಂತೆ ಸಮಾನವಾಗಿ ನೋಡಬೇಕು' ಎಂದು ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಕ್ರೀಡಾಪಟು ಗಿರೀಶ್ ಹೊಸನಗರ ಹೇಳಿದರು.

ವಿವಿಧ ಸ್ವಯಂಸೇವಾ ಸಂಘಟನೆಗಳ ಸಹಕಾರದಲ್ಲಿ ನಗರದ ಅಪೋಲೊ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

`ಅಂಗವಿಕಲರಲ್ಲೂ ವಿಶೇಷ ಪ್ರತಿಭೆ ಇದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ನಾನು ಸಾಧನೆ ಮಾಡುವ ವೇಳೆ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಈ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆದ ಕಾರಣ ಈ ಹಂತಕ್ಕೆ ತಲುಪಲು ಸಾಧ್ಯವಾಯಿತು. 2016ರ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಬೇಕು ಎಂಬುದು ನನ್ನ ಮಹದಾಸೆ' ಎಂದು ಅವರು ತಿಳಿಸಿದರು.

ಅಪೋಲೊ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಮಾಪತಿ ಪನ್ಯಾಲ ಮಾತನಾಡಿ, `ಪ್ರತಿ ವ್ಯಕ್ತಿ ಗುರಿ ತಲುಪಲು ಸಹಕಾರ ಅಗತ್ಯ. ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಲು ನೆರವು ಅಗತ್ಯ' ಎಂದರು. 

ಇದೇ ಸಂದರ್ಭದಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. ಚಿತ್ರನಟ ವಿಜಯ ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.