ADVERTISEMENT

ಅನುಮಾನಾಸ್ಪದ ಓಡಾಟ: ರಾಜಸ್ತಾನ ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 20:00 IST
Last Updated 1 ಜನವರಿ 2012, 20:00 IST

ಬೆಂಗಳೂರು: ನಗರದ ಎಚ್‌ಎಎಲ್ ವಿಮಾನ ನಿಲ್ದಾಣದ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ರಾಜಸ್ತಾನ ಮೂಲದ ಸಮೀರ್ ಶಂಷೀರ್ ರಾಣಾ (41) ಎಂಬುವರನ್ನು ಏರ್‌ಪೋರ್ಟ್ ಠಾಣೆ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ಅವರು ಒಂದು ವರ್ಷದಿಂದ ಅನ್ನಸಂದ್ರಪಾಳ್ಯದ ಬಾಡಿಗೆ ಮನೆಯಲ್ಲಿ ಪತ್ನಿ ಬರ್ಖತ್ ಉನ್ನೀಸಾ ಮತ್ತು ಮಕ್ಕಳೊಂದಿಗೆ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾಣಾ ಅವರು ಸೇನಾ ಅಧಿಕಾರಿಗಳಂತೆ ಸಮವಸ್ತ್ರ ಧರಿಸಿ ಆರೇಳು ತಿಂಗಳುಗಳಿಂದ ಎಚ್‌ಎಎಲ್ ವಿಮಾನ ನಿಲ್ದಾಣದ ಆವರಣದಲ್ಲಿ ಓಡಾಡುತ್ತಿದ್ದರು. ಅಲ್ಲದೇ ಸೇನಾ ಅಧಿಕಾರಿಗಳ ಸೋಗಿನಲ್ಲಿ ನಕಲಿ ದಾಖಲೆ ಪತ್ರಗಳ ನೆರವಿನಿಂದ ಕಮಾಂಡೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ಪಡೆದಿದ್ದರು. ಅಂತೆಯೇ ರಾತ್ರಿ ವಿಮಾನ ನಿಲ್ದಾಣದ ಆವರಣದಲ್ಲಿ ಓಡಾಡುತ್ತಿದ್ದ ಅವರನ್ನು ಭಯೋತ್ಪಾದಕ ಇರಬಹುದುದೆಂದು ಭಾವಿಸಿದ ನಿಲ್ದಾಣದ ಭದ್ರತಾ ಸಿಬ್ಬಂದಿ ಠಾಣೆಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರುವುದಾಗಿ ರಾಣಾ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ. ಆ ಸಂಬಂಧ ನಕಲಿ ಗುರುತಿನ ಚೀಟಿಯೊಂದನ್ನು ಅವರು ನೀಡಿದ್ದಾರೆ. ಈ ಬಗ್ಗೆ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ವಂಚನೆ, ಸೇನಾ ಸಿಬ್ಬಂದಿಯ ಸಮವಸ್ತ್ರದ ದುರ್ಬಳಕೆ, ಅತಿಕ್ರಮ ಪ್ರವೇಶ, ನಕಲಿ ದಾಖಲೆ ಪತ್ರಗಳ ಸೃಷ್ಟಿ ಮತ್ತು ಅವುಗಳನ್ನು ಬಳಸಿ ವಂಚಿಸಲು ಯತ್ನಿಸಿದ ಆರೋಪದ ಮೇಲೆ ರಾಣಾ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.