ADVERTISEMENT

ಅಪಘಾತ: ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ಬೆಂಗಳೂರು: ನಗರದ ಎಲೆಕ್ಟ್ರಾನಿಕ್‌ಸಿಟಿ, ಬನಶಂಕರಿ ಮತ್ತು ಮಡಿವಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಆರು ವರ್ಷದ ಬಾಲಕ ಸೇರಿ ಮೂರು ಮಂದಿ ಮೃತಪಟ್ಟಿದ್ದಾರೆ.

ಹಿಮ್ಮುಖವಾಗಿ ಚಲಿಸಿದ ಲಾರಿ ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಎಲೆಕ್ಟ್ರಾನಿಕ್‌ಸಿಟಿ ಸಂಚಾರ ಠಾಣೆ ವ್ಯಾಪ್ತಿಯ ಬೆಟ್ಟದಾಸನಪುರದಲ್ಲಿ ಶುಕ್ರವಾರ ನಡೆದಿದೆ. ಕೂಲಿ ಕಾರ್ಮಿಕ ಅಂಬರೀಶ್ ಎಂಬುವರ ಮಗ ಕೃಷ್ಣ ಮೃತಪಟ್ಟವನು. ಬೆಟ್ಟದಾಸನಪುರದ ಬಂಡೆ ಸಮೀಪ ಅಂಬರೀಶ್ ಅವರ ಮನೆ ಇದೆ. ಕೃಷ್ಣ ಬಹಿರ್ದೆಸೆಗೆ ಹೋಗಿದ್ದ.

ಅದೇ ಸಂದರ್ಭದಲ್ಲಿ ಕಲ್ಲು ತುಂಬಿಕೊಳ್ಳಲು ಬಂದಿದ್ದ ಲಾರಿ ಚಾಲಕ, ಬಾಲಕ ಇರುವುದನ್ನು ಗಮನಿಸಿದೆ ವಾಹನವನ್ನು ಹಿಮ್ಮುಖವಾಗಿ ಚಾಲನೆ ಮಾಡಿದಾಗ ಈ ಅಪಘಾತ ಸಂಭವಿಸಿದೆ. ವಾಹನ ವಶಕ್ಕೆ ಪಡೆದು ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಎಂಜಿನಿಯರ್ ಸಾವು
ಕಾರು ಡಿಕ್ಕಿ ಹೊಡೆದು  ಬೈಕ್ ಸವಾರ ಮೃತಪಟ್ಟಿರುವ ಘಟನೆ ಬೊಮ್ಮನಹಳ್ಳಿ ಬಸ್ ನಿಲ್ದಾಣದ ಸಮೀಪ ಶುಕ್ರವಾರ ಮಧ್ಯಾಹ್ನ ನಡೆದಿದೆ. ಬಿಸ್ಮಿಲ್ಲಾನಗರದ ನಿವಾಸಿಯಾಗಿದ್ದ ಸೋಹೇಲ್ ಅಜೀಂ (30) ಮೃತಪಟ್ಟವರು. ಆಂಧ್ರದ ವಾರಂಗಲ್‌ನ ಅಜೀಂ ಬಿ.ಟೆಕ್ ಪದವಿ ಪಡೆದಿದ್ದರು.

ವೈಟ್‌ಫಿಲ್ಡ್‌ನಲ್ಲಿರುವ ಖಾಸಗಿ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 3.15ರ ಸುಮಾರಿಗೆ ಬೈಕ್‌ನಲ್ಲಿ ಎಲೆಕ್ಟ್ರಾನಿಕ್‌ಸಿಟಿ ಕಡೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಅಜೀಂ ಅವರ ಮೇಲೆ ಕಾರಿನ ಚಕ್ರ ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೃದ್ಧೆ ಸಾವು
ರಸ್ತೆ ದಾಟುತ್ತಿದ್ದ ವೃದ್ಧೆಗೆ ಕಾರ್ಖಾನೆಯೊಂದರ ಬಸ್ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬನಶಂಕರಿ ಎರಡನೇ ಹಂತದ ಯಾರಬ್‌ನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಕಾವೇರಿನಗರದ ನಿವಾಸಿ ಜುಬೇದ್ ಉನ್ನೀಸಾ (65) ಮೃತಪಟ್ಟವರು. ಮೊಮ್ಮಗನನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಅವರು ಯಾರಬ್‌ನಗರದ ಒಂಬತ್ತನೇ ಮುಖ್ಯರಸ್ತೆಯನ್ನು ದಾಟುವಾಗ ಬಸ್ ಡಿಕ್ಕಿ ಹೊಡೆದಿದೆ.

ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ನೋಡಿದ ಮೊಮ್ಮಗ ನಿಂತುಕೊಂಡಿದ್ದಾನೆ. ಆದರೆ ಜುಬೇದ್ ಅವರು ರಸ್ತೆ ದಾಟಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ. ಬಸ್ ಚಾಲಕನನ್ನು ಬಂಧಿಸಿ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.