ADVERTISEMENT

ಅಪಹರಿಸಿ ಕೊಲೆ ಮಾಡಿದ ಸ್ನೇಹಿತರು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಕಾಲ್‌ಸೆಂಟರ್‌ನ ಕಾರು ಚಾಲಕ ಆನಂದ್ (24) ಎಂಬುವರನ್ನು ಸ್ನೇಹಿತರೇ ಅಪಹರಿಸಿ ಕತ್ತು ಕೊಯ್ದು ಕೊಲೆ ಮಾಡಿ ಶವವನ್ನು ತುಮಕೂರಿನ ಕ್ಯಾತಸಂದ್ರ ಬಳಿ ಎಸೆದು ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಪದ್ಮನಾಭನಗರದ ರಾಘವೇಂದ್ರ ಲೇಔಟ್ ನಿವಾಸಿಯಾದ ಆನಂದ್ ಅವರು ಮಾರತ್‌ಹಳ್ಳಿಯಲ್ಲಿರುವ ಇಕೊ ಸ್ಪೈಸಿ ಎಂಬ ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಕಾಲ್‌ಸೆಂಟರ್‌ನಲ್ಲಿ ಆನಂದ್ ಅವರ ಸ್ನೇಹಿತ ಜಯರಾಮ ಎಂಬಾತ ಕೆಲಸ ಮಾಡುತ್ತಿದ್ದ.

ವಾಹನದ ಮಾರ್ಗಕ್ಕೆ ಸಂಬಂಧಿಸಿದಂತೆ ಇವರ ಮಧ್ಯೆ ಕೆಲ ದಿನಗಳ ಹಿಂದೆ ಜಗಳವಾಗಿತ್ತು. ಆನಂದ್ ತನ್ನ ಸ್ನೇಹಿತರ ಜತೆಗೂಡಿ ಜಯರಾಮನ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಆತ ಹೊಂಚು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆ.28ರಂದು ಮಾರತ್‌ಹಳ್ಳಿ ಸಮೀಪ ಹೋಗುತ್ತಿದ್ದ ಆನಂದ್‌ನನ್ನು ಜಯರಾಮ, ಪ್ರದೀಪ ಮತ್ತು ವೆಂಕಟೇಶ ಎಂಬುವರು ಕಾರಿನಲ್ಲಿ ಅಪಹರಿಸಿದ್ದರು. ಆತನನ್ನು ಕ್ಯಾತಸಂದ್ರ ಸಮೀಪದ ಉರಡಗೆರೆ ಎಂಬಲ್ಲಿಗೆ ಕರೆದೊಯ್ದಿದ್ದ ದುಷ್ಕರ್ಮಿಗಳು ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದರು. ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮಗ ಮನೆಗೆ ವಾಪಸ್ ಬಾರದಿದ್ದಾಗ ಆತಂಕಗೊಂಡ ಆನಂದನ ಪೋಷಕರು ಆ. 28ರಂದೇ ದೂರು ನೀಡಿದ್ದರು. ಕಾಣೆಯಾದ ಬಗ್ಗೆ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆನಂದನ ಶವ ಉರಡಗೆರೆ ಬಳಿ ಪತ್ತೆಯಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಜಯರಾಮನ ಜತೆ ಆನಂದ ಜಗಳವಾಡಿದ್ದು ಗೊತ್ತಾಯಿತು. ತಲೆಮರೆಸಿಕೊಂಡಿದ್ದ ಜಯರಾಮನನ್ನು ವಶಕ್ಕೆ ಪಡೆಯಲಾಗಿದೆ.

ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್, ಎಸಿಪಿ ವೀರಭದ್ರೇಗೌಡ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಆರ್.ಗೋವಿಂದರಾಜು ಮತ್ತು ಸಿಬ್ಬಂದಿ ಪ್ರಕರಣ ಭೇದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.