ADVERTISEMENT

ಅಪಾಯ ತಡೆಗೆ ಬೆಸ್ಕಾಂನಿಂದ ಸಲಾಕೆ..!

ಪ್ರಜಾವಾಣಿ ವಿಶೇಷ
Published 27 ಫೆಬ್ರುವರಿ 2013, 20:11 IST
Last Updated 27 ಫೆಬ್ರುವರಿ 2013, 20:11 IST
ವಿದ್ಯುತ್ ಕಂಬದ ಅಕ್ಕಪಕ್ಕದಲ್ಲಿ ತಲಾ ಮೂರು ಅರ್ಥಿಂಗ್ ರಾಡ್‌ಗಳನ್ನು ಅಳವಡಿಸಿ `ಸುರಕ್ಷತಾ ವಲಯ' ನಿರ್ಮಿಸಿದ್ದು ಹೀಗೆ
ವಿದ್ಯುತ್ ಕಂಬದ ಅಕ್ಕಪಕ್ಕದಲ್ಲಿ ತಲಾ ಮೂರು ಅರ್ಥಿಂಗ್ ರಾಡ್‌ಗಳನ್ನು ಅಳವಡಿಸಿ `ಸುರಕ್ಷತಾ ವಲಯ' ನಿರ್ಮಿಸಿದ್ದು ಹೀಗೆ   

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ವಿದ್ಯುತ್ ಅವಘಡಗಳ ನಿಯಂತ್ರಿಸುವ ಸಲುವಾಗಿ `ಸುರಕ್ಷತಾ ವಲಯ' ಸೃಷ್ಟಿಸಿಯೇ ಮಾರ್ಗಗಳ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ 2012ರ ಏಪ್ರಿಲ್‌ನಿಂದ ಫೆಬ್ರುವರಿ ತಿಂಗಳ ನಡುವೆ ವಿದ್ಯುತ್ ಹರಿದು ಇಲಾಖೆಯ ಏಳು ಮಂದಿ, 79 ಸಾರ್ವಜನಿಕರು ಮೃತಪಟ್ಟಿದ್ದರು ಮತ್ತು ಇಲಾಖೆಯ 30 ಮಂದಿ ಹಾಗೂ 55 ಮಂದಿ ಸಾರ್ವಜನಿಕರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ದುರಂತಗಳ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ವಹಿಸಲು ಹಾಗೂ ಜಾಗೃತಿ ಮೂಡಿಸಲು ಬೆಸ್ಕಾಂ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ.  

ವಿದ್ಯುತ್ ಸಂಪರ್ಕ ತೆಗೆದು ಮಾರ್ಗಗಳ ರಿಪೇರಿ ಕಾರ್ಯ ಕೈಗೆತ್ತಿಕೊಳ್ಳುವುದು ಸಾಮಾನ್ಯ. ಇಂತಹ ಸಂದರ್ಭದಲ್ಲೂ ಕೆಲವೊಮ್ಮೆ ಕಾರ್ಖಾನೆಗಳ ಜನರೇಟರ್, ಮನೆಯಲ್ಲಿರುವ ಯುಪಿಎಸ್ ಸೇರಿದಂತೆ ವಿವಿಧ ಉಪಕರಣಗಳಿಂದ ವಿದ್ಯುತ್ ಹರಿದು ಅವಘಡಗಳು ಸಂಭವಿಸಿದ ಪ್ರಕರಣಗಳು ನಡೆದಿವೆ. ಇಂತಹ ಅಪಾಯವನ್ನು ನಿವಾರಿಸಲು `ಸುರಕ್ಷತಾ ವಲಯ' ಸೃಷ್ಟಿಸಲಾಗುತ್ತದೆ. 11 ಕೆ.ವಿ. ಮಾರ್ಗದ ಎರಡು ಭಾಗದಲ್ಲಿ ತಲಾ ಮೂರು ಅರ್ಥಿಂಗ್ ರಾಡ್‌ಗಳನ್ನು ಹಾಕಲಾಗುತ್ತದೆ. ಬಳಿಕ ದುರಸ್ತಿ ಕೈಗೆತ್ತಿಕೊಳ್ಳಲಾಗುತ್ತದೆ. ಒಂದು ಪಕ್ಷ ಮಾರ್ಗದಲ್ಲಿ ವಿದ್ಯುತ್ ಹರಿದರೂ ಈ ರಾಡ್‌ಗಳು ಅದನ್ನು ಶೂನ್ಯಕ್ಕೆ ಇಳಿಸಿ ಅಪಾಯವನ್ನು ತಡೆಯುತ್ತವೆ.

`ಮಾರ್ಚ್ 1ರೊಳಗೆ ಎಲ್ಲ ಕಡೆಗಳಲ್ಲೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಗತ್ಯ ಇರುವಷ್ಟು ಅರ್ಥಿಂಗ್ ರಾಡ್‌ಗಳ ಖರೀದಿ ಮಾಡಿಕೊಳ್ಳುವ ಅಧಿಕಾರವನ್ನು ಮುಖ್ಯ ಎಂಜಿನಿಯರ್‌ಗಳು ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ನೀಡಲಾಗಿದೆ. ಇದಕ್ಕೆ ಹೆಚ್ಚುವರಿ ಅನುದಾನದ ಅಗತ್ಯ ಇಲ್ಲ' ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಣಿವಣ್ಣನ್   ಅವರು `ಪ್ರಜಾವಾಣಿ'ಗೆ ತಿಳಿಸಿದರು.

`ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಇಲಾಖಾ ಸಿಬ್ಬಂದಿಗೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ. ಸುರಕ್ಷತಾ ವಲಯಗಳನ್ನು ಸೃಷ್ಟಿಸಿ ಅಪಘಾತ ಪ್ರಕರಣಗಳನ್ನು ಶೂನ್ಯಕ್ಕೆ ಇಳಿಸಿದ ವಲಯ, ಉಪವಲಯಕ್ಕೆ ಆಕರ್ಷಕ ಬಹುಮಾನ ಹಾಗೂ ಪ್ರಶಸ್ತಿ ನೀಡಲಾಗುವುದು' ಎಂದು ಅವರು ತಿಳಿಸಿದರು.

`ಹೆಚ್ಚಿನ ಅಪಘಾತಗಳು ಇಲಾಖಾ ಸಿಬ್ಬಂದಿಯ ಅತ್ಯುತ್ಸಾಹ ಹಾಗೂ ಮುನ್ನೆಚ್ಚರಿಕೆಯ ಕೊರತೆಯಿಂದ ಸಂಭವಿಸುತ್ತಿವೆ. ರಾಜಧಾನಿಯಲ್ಲಿ ಟ್ರಾನ್ಸ್‌ಫಾರ್ಮರ್ ಕೇಂದ್ರಗಳಿಗೆ ಒತ್ತಡವೂ ಜಾಸ್ತಿ. ಹೆಚ್ಚಿನ ಕಡೆಗಳಲ್ಲಿ ಅಕ್ಕಪಕ್ಕದಲ್ಲೇ, ಎದುರು ಬದುರಾಗಿ ಮಾರ್ಗಗಳು ಇರುತ್ತವೆ. ಇಂತಹ ಕಡೆಗಳಲ್ಲಿ ಅಪಾಯ ಜಾಸ್ತಿ. ಇಂತಹ ಮಾರ್ಗಗಳಲ್ಲಿ ವಿದ್ಯುತ್ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಿಯೇ ರಿಪೇರಿ ಕೈಗೆತ್ತಿಕೊಳ್ಳಬೇಕು. ಜೊತೆಗೆ ಕಾಮಗಾರಿ ಕೈಗೆತ್ತಿಕೊಳ್ಳುವಾಗ ಎಚ್ಚರಿಕೆ ಫಲಕಗಳನ್ನು ಹಾಕಬೇಕು' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

`ಈ ಹಿಂದೆಯೂ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿತ್ತು. ಜೊತೆಗೆ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಲಾಗಿದೆ. ಆದರೆ, ವರ್ಷದಿಂದ ವರ್ಷಕ್ಕೆ ವಿದ್ಯುತ್ ಅಪಘಾತಗಳು ಹೆಚ್ಚುತ್ತಿವೆ. ವಿದ್ಯುತ್ ಅವಘಡಗಳ ನಿಯಂತ್ರಣಕ್ಕೆ ಬೆಸ್ಕಾಂ ಸಹಾಯವಾಣಿ (080-22873333) ಆರಂಭಿಸಿದ್ದು, ಸಾರ್ವಜನಿಕರು ಮಾಹಿತಿ ನೀಡಿದರೆ ಆಯಾ ವಲಯಕ್ಕೆ ಸಂದೇಶ ರವಾನಿಸಿ ತ್ವರಿತ ಕ್ರಮ ಕೈಗೊಳ್ಳಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.