ADVERTISEMENT

ಅಬಕಾರಿ ಉಪ ಆಯುಕ್ತ ಕಚೇರಿ ಮೇಲೆ ಲೋಕಾಯುಕ್ತ ದಾಳಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ಬೆಂಗಳೂರು: ನಗರದ ಜೆ.ಸಿ ರಸ್ತೆಯಲ್ಲಿರುವ ಮೂರು ಅಬಕಾರಿ ಉಪ ಆಯುಕ್ತ ಕಚೇರಿಗಳ ಮೇಲೆ ಗುರುವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ನಗದು ಹಾಗೂ ವಿದೇಶಿ ಮದ್ಯವನ್ನು ವಶಪಡಿಸಿಕೊಂಡಿದ್ದು, ಉಪ ಆಯುಕ್ತರೊಬ್ಬರನ್ನು ಬಂಧಿಸಿದ್ದಾರೆ. ಪೂರ್ವ ವಿಭಾಗದ ಅಬಕಾರಿ ಉಪ ಆಯುಕ್ತರಾದ ಮೋಹನ್‌ಕುಮಾರ್ ಬಂಧಿತರು.

ಮಧ್ಯಾಹ್ನ ಅವರ ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಅವರ ಲಕೋಟೆಯಲ್ಲಿದ್ದ 27,200 ರೂಪಾಯಿ ನಗದು ಹಾಗೂ 16 ವಿದೇಶಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
 
ದಾಳಿ ಮುಂದುವರಿಸಿದ ಅಧಿಕಾರಿಗಳು, ಪಶ್ಚಿಮ ವಿಭಾಗದ ಅಬಕಾರಿ ಉಪ ಆಯುಕ್ತ ಮಹಮ್ಮದ್ ಫಜಿವುದ್ದೀನ್ ಅವರ ಕಚೇರಿಯಲ್ಲಿ 13,300 ರೂಪಾಯಿ ನಗದು ಮತ್ತು ಆರು ಮದ್ಯದ ಬಾಟಲಿಗಳನ್ನು ಹಾಗೂ ದಕ್ಷಿಣ ವಿಭಾಗದ ಅಬಕಾರಿ ಉಪ ಆಯುಕ್ತ ಮಲ್ಲಿಕಾರ್ಜುನ್ ದದ್ದಿ ಅವರ ಕಚೇರಿಯಲ್ಲಿ ಆರು ವಿದೇಶಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಇಬ್ಬರೂ ಪರಾರಿಯಾಗಿದ್ದು, ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.  

ಡಿವೈಎಸ್‌ಪಿಗಳಾದ ಎಚ್.ಎಸ್. ಮಂಜುನಾಥ್ ಹಾಗೂ ಎಸ್.ಗಿರೀಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಘಟನೆ ಬಗ್ಗೆ ಅಬಕಾರಿ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ಇನ್‌ಸ್ಪೆಕ್ಟರ್ ಶಿವಶಂಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.