ADVERTISEMENT

ಅಬ್ದುಲ್‌ ಕಲಾಂ ಉತ್ತರಕ್ಕೆ ವಿದ್ಯಾರ್ಥಿಗಳ ಪೂರ್ಣಾಂಕ

ಸಂವಾದದಲ್ಲಿ ಮಕ್ಕಳೊಂದಿಗೆ ಬೆರೆತ ಮಾಜಿ ರಾಷ್ಟ್ರಪತಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:39 IST
Last Updated 17 ಸೆಪ್ಟೆಂಬರ್ 2013, 19:39 IST

ಬೆಂಗಳೂರು: ‘ವಿಜ್ಞಾನದ ಆವಿಷ್ಕಾರ ದಿಂದ ದೇಶದ ಬಡತನ ನಿವಾರಿಸಲು ಸಾಧ್ಯವೇ?’
‘ಜಾಗತೀಕರಣದಿಂದ ದೇಶದ ಅಭಿವೃದ್ಧಿಗೆ ಆಗುವ ಪ್ರಯೋಜನವೇನು?’
‘ಸೌರಶಕ್ತಿ ಬಳಕೆ ಹೆಚ್ಚಾಗಬೇಕೆಂದು ಸರ್ಕಾರ ಹೇಳುತ್ತದೆ. ಆದರೆ, ಸೌರಫಲಕಗಳ ಬೆಲೆ ಹೆಚ್ಚಾಗಿದೆ ಯಲ್ಲಾ. ಇದಕ್ಕೇನು ಪರಿಹಾರ?’....
ವಿದ್ಯಾರ್ಥಿಗಳ ಕುತೂಹಲದ ಪ್ರಶ್ನೆಗಳಿಗೆ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ನಗುಮೊಗದೊಂದಿಗೆ ಉತ್ತರಿಸಿದರು. ಕಲಾಂ ಉತ್ತರಕ್ಕೆ ವಿದ್ಯಾರ್ಥಿಗಳು ಚಪ್ಪಾಳೆಯ ಪೂರ್ಣಾಂಕ ನೀಡಿದರು!

ಜೆ.ಪಿ.ನಗರದ ಮಿರಾಂಬಿಕಾ ಶಾಲೆಯಲ್ಲಿ ಮಂಗಳವಾರ ನಡೆದ ಶಾಲೆಯ ಬೆಳ್ಳಿಹಬ್ಬದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗಳೊಂದಿಗೆ ನಡೆದ ಸಂವಾದದಲ್ಲಿ ಡಾ.ಕಲಾಂ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.

ಆರನೇ ತರಗತಿ ವಿದ್ಯಾರ್ಥಿನಿ ಪ್ರವೀಣಾ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿಜ್ಞಾನದ ಆವಿಷ್ಕಾರಗಳಿಂದ ಕೃಷಿಯ ಉತ್ಪಾದನೆ ಹೆಚ್ಚಿಸಬಹುದು. ಆಹಾರ ಉತ್ಪಾದನೆ ಹೆಚ್ಚಾದರೆ ಹಸಿವು ದೂರಾಗುತ್ತದೆ. ಇದಲ್ಲದೆ ಹೊಸ ಆವಿಷ್ಕಾರಗಳಿಂದ ಎಲ್ಲ ಕ್ಷೇತ್ರಗಳಲ್ಲೂ ಉತ್ಪಾದನೆ ಹೆಚ್ಚಾಗುತ್ತದೆ. ಉದ್ಯೋಗ ಸೃಷ್ಟಿಯಾಗುವುದ ರಿಂದ ಬಡತನ ನಿವಾರಣೆಯಾಗುತ್ತದೆ’ ಎಂದರು.

ಒಂಬತ್ತನೇ ತರಗತಿ ವಿದ್ಯಾರ್ಥಿನಿ ಸಂಜನಾ ಪ್ರಶ್ನೆಗೆ ಪ್ರತಿಕ್ರಿಸಿದ ಕಲಾಂ, ‘ಜಾಗತೀಕರಣದಿಂದ ಸ್ಪರ್ಧೆ ಹೆಚ್ಚಾಗುತ್ತದೆ. ಸ್ಪರ್ಧೆಯಿಂದ ಜ್ಞಾನ ವೃದ್ಧಿಯಾಗುತ್ತದೆ. ಜ್ಞಾನದಿಂದ ಹೊಸ ಆವಿಷ್ಕಾರ ಸಾಧ್ಯವಾಗುತ್ತದೆ. ಹೊಸ ಆವಿಷ್ಕಾರದಿಂದ ದೇಶ ಅಭಿವೃದ್ಧಿಯಾಗುತ್ತದೆ’ ಎಂದು ಹೇಳಿದರು.

ಏಳನೇ ತರಗತಿ ವಿದ್ಯಾರ್ಥಿನಿ ಇಂಚರ ಪ್ರಶ್ನೆಗೆ ಉತ್ತರಿಸಿದ ಅವರು, ‘ದೇಶದ ಪ್ರತಿ ಮನೆಯಲ್ಲೂ ಸೌರಶಕ್ತಿ ಬಳಕೆಯಾಗಬೇಕು. ಸೌರಶಕ್ತಿಯಿಂದ ವಿದ್ಯುತ್‌ ಉತ್ಪಾದಿಸುವ ಘಟಕಗಳು ಹೆಚ್ಚಾಗಬೇಕು. ಸೌರಶಕ್ತಿಯ ಬಳಕೆ ಹೆಚ್ಚಾದರೆ, ಸೌರಫಲಕಗಳ (ಸೋಲಾರ್‌ ಪ್ಯಾನೆಲ್‌) ಬೆಲೆ ಕಡಿಮೆಯಾಗುತ್ತದೆ. ಆಗ ಸರ್ಕಾರವೂ ಸೌರಶಕ್ತಿಯಿಂದ ಹೆಚ್ಚು ವಿದ್ಯುತ್‌ ಉತ್ಪಾದಿಸಲು ಮುಂದಾಗುತ್ತದೆ’ ಎಂದು ತಿಳಿಸಿದರು.

‘ಪ್ರತಿವರ್ಷ ರೂ 90 ಸಾವಿರ ಕೋಟಿ ಮೌಲ್ಯದ ತೈಲೋತ್ಪನ್ನಗಳನ್ನು ವಿದೇಶಗಳಿಂದ ಖರೀದಿಸಲಾಗುತ್ತಿದೆ. ಹೀಗಾಗಿ, ನವೀಕರಿಸ ಬಹುದಾದ ಇಂಧನ ಮೂಲಗಳ ಬಳಕೆಯ ಕಡೆಗೆ ಎಲ್ಲರೂ ಗಮನ ನೀಡಬೇಕು’ ಎಂದರು.

‘ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲು ನಾನು ಸದಾ ಸಿದ್ಧವಿರುತ್ತೇನೆ. ವಿದ್ಯಾರ್ಥಿಗಳು apj@abdulkalam.com ಇಮೇಲ್‌ ವಿಳಾಸಕ್ಕೆ ಪ್ರಶ್ನೆಗಳನ್ನು ಕಳಿಸಿದರೆ ತಪ್ಪದೆ ಉತ್ತರ ನೀಡುತ್ತೇನೆ’ ಎಂದರು.

ಶಾಸಕ ಬಿ.ಎನ್‌.ವಿಜಯ್‌ ಕುಮಾರ್‌, ಶಾಲೆಯ ಅಧ್ಯಕ್ಷ ಅಜಿತ್‌ ಸಬ್ನಿಸ್‌, ಪ್ರಾಂಶುಪಾಲರಾದ ಶಾರದಾಂಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.