ADVERTISEMENT

ಅಮ್ಮಂದಿರಿಗೆ ಶುಭ ಕೋರಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 13 ಮೇ 2012, 19:30 IST
Last Updated 13 ಮೇ 2012, 19:30 IST
ಅಮ್ಮಂದಿರಿಗೆ ಶುಭ ಕೋರಿದ ಮಕ್ಕಳು
ಅಮ್ಮಂದಿರಿಗೆ ಶುಭ ಕೋರಿದ ಮಕ್ಕಳು   

ಬೆಂಗಳೂರು: ವಿಶ್ವ ಅಮ್ಮಂದಿರ ದಿನಾಚರಣೆಯನ್ನು ನಗರದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಈ ಪ್ರಯುಕ್ತ ವಿವಿಧೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ಅಮ್ಮನಿಗೆ ವೈಯಕ್ತಿಕವಾಗಿ ಶುಭಾಶಯ ಕೋರಿದರು.

ಅಮ್ಮ ಮತ್ತು ಆಕೆಯ ಮಹತ್ವವನ್ನು ಸಾರುವಂತಹ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಅಪೋಲೊ ಆಸ್ಪತ್ರೆಯು ಅಮ್ಮಂದಿರ ದಿನಾಚರಣೆಯ ಭಾಗವಾಗಿ ಆಸ್ಪತ್ರೆಯ ಆವರಣದಲ್ಲಿ `ನನ್ನಮ್ಮ ಸೂಪರ್~ ಎಂಬ ಸಮಾರಂಭ ಆಯೋಜಿಸಿತ್ತು. ಇದರಲ್ಲಿ ನಗರದ ವಿವಿಧ ಭಾಗಗಳಿಂದ ಅಮ್ಮಂದಿರು ತಮ್ಮ ಮಕ್ಕಳೊಂದಿಗೆ ಭಾಗವಹಿಸಿದ್ದರು.

ಅಮ್ಮಂದಿರಿಗಾಗಿ ಅಡುಗೆ ಸ್ಪರ್ಧೆ ಹಾಗೂ ಫ್ಯಾಷನ್ ಶೋ ಆಯೋಜಿಸಲಾಗಿತ್ತು. 20ಕ್ಕಿಂತಲೂ ಹೆಚ್ಚು ಅಮ್ಮಂದಿರು ಸ್ಪರ್ಧೆಯ ಕೊನೆಯ ಸುತ್ತಿಗೆ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯು ಅಮ್ಮಂದಿರಿಗಾಗಿ ವಿಶೇಷ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಅಮ್ಮಂದಿರು ವಯೋಮಿತಿಯ ಬೇಧ ಮರೆತು ಫ್ಯಾಷನ್ ಶೋನಲ್ಲಿ ಉತ್ಸುಕತೆಯಿಂದ ಭಾಗವಹಿಸಿದ್ದರು.

ಪ್ರಥಮ ಬಹುಮಾನ ಗಳಿಸಿದ ಶಾಜಿಯಾ ಖಾನ್, `ಕೌಟುಂಬಿಕ ಜವಾಬ್ದಾರಿ ನಿರ್ವಹಿಸುತ್ತಿರುವ ನಮ್ಮಂತಹ ಅಮ್ಮಂದಿರಿಗೆ ಇಂತಹ ವಿನೂತನ ಸ್ಪರ್ಧೆ ಖುಷಿ ನೀಡಿದೆ. ನನ್ನ ಮಗನಿಗೆ ಇಷ್ಟವಾದ ತಿನಿಸುಗಳನ್ನು ತಯಾರಿಸಿ ಪ್ರಥಮ ಬಹುಮಾನ ಗಳಿಸಿದ್ದೇನೆ~ ಎಂದು ಹರ್ಷ ವ್ಯಕ್ತಪಪಡಿಸಿದರು.

ಮೈಕ್ರೊ ಗ್ರಾಮ್ ಸಂಸ್ಥೆಯು `ತಾಯಿಯೊಬ್ಬಳನ್ನು ಸಂತಸವಾಗಿರಿಸಿ~ ಎಂಬ ಘೋಷ ವಾಕ್ಯದೊಂದಿಗೆ ವಿವಿಧ ಬೇಕರಿ ಉತ್ಪನ್ನ ಹಾಗೂ ವಿಶೇಷ ತಿನಿಸುಗಳ ಬುಟ್ಟಿಯನ್ನು ಮಾರಾಟ ಮಾಡಿದವು. ಇದಲ್ಲದೇ ತಾಯಂದಿರ ಸಮಸ್ಯೆಗಳ ಕುರಿತು ಚರ್ಚೆ ಹಮ್ಮಿಕೊಳ್ಳಲಾಗಿತ್ತು. ಸ್ತ್ರೀರೋಗ ತಜ್ಞೆ ಡಾ. ಮೀನಾಕ್ಷಿ ಭರತ್, ವಸ್ತ್ರವಿನ್ಯಾಸಕಿ ಶ್ವೇತಾ ಶೆಟ್ಟರ್, ಸಂಸ್ಥೆಯ ರಂಗನ್ ವರದನ್ ಇತರರು ಭಾಗವಹಿಸಿದ್ದರು.

ಮಹಿಳೆಯರ ಸಬಲೀಕರಣಕ್ಕೆ ಸಣ್ಣ ಉದ್ಯಮಗಳು ಹೇಗೆ ನೆರವಾಗುತ್ತದೆ ಎಂಬ ಬಗ್ಗೆಯೂ ಅರಿವು ಮೂಡಿಸಲಾಯಿತು. ಬಹುತೇಕ ಅಮ್ಮಂದಿರು ದಿನಾಚರಣೆಯ ಅರಿವೇ ಇಲ್ಲದೇ ಎಂದಿನಂತೆ ತಮ್ಮ ಕರ್ತವ್ಯದಲ್ಲಿ ಮುಳುಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.