ADVERTISEMENT

ಅರಣ್ಯದಲ್ಲಿ ಗಣಿಗಾರಿಕೆ: ಅಗತ್ಯವಾದರೆ ಲೋಕಾಯುಕ್ತ ತನಿಖೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:25 IST
Last Updated 7 ಅಕ್ಟೋಬರ್ 2011, 19:25 IST

ಬೆಂಗಳೂರು: `ಕನಕಪುರದಿಂದ ಚಾಮರಾಜನಗರದವರೆಗೂ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗ್ರಾನೈಟ್ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಕುರಿತು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರೊಂದಿಗೆ ಚರ್ಚಿಸಿ ಅಗತ್ಯವೆನಿಸಿದರೆ ಲೋಕಾಯುಕ್ತ ತನಿಖೆಗೆ ವಹಿಸಲಾಗುವುದು~ ಎಂದು ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್ ಶುಕ್ರವಾರ ಇಲ್ಲಿ ಹೇಳಿದರು.

`ಕಾನೂನುಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳಿವೆ. ಆ ಭಾಗದಲ್ಲಿ ಏನೇನು ಆಗುತ್ತಿದೆ ಎಂಬ ಬಗ್ಗೆ ಮೊದಲು ಅಧ್ಯಯನ ಮಾಡುತ್ತೇನೆ. ಅಧಿಕಾರಿಗಳೊಂದಿಗೆ ಚರ್ಚಿಸಿ ವರದಿ ತರಿಸಿಕೊಂಡು ನಂತರ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ~ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.

`ಕನಕಪುರ ಸುತ್ತಮುತ್ತ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕಡೆಯವರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಕೆಲವರು ದೂರು ನೀಡಿದ್ದಾರೆ. ಈ ವಿಷಯ ಅರಿತು ಶಿವಕುಮಾರ್ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಪಕ್ಷವನ್ನು ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯ ಮುಖಂಡರ ಮೇಲೆ ಒತ್ತಡ ಹೇರಿ, ನನ್ನ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡಿಸಿದ್ದಾರೆ~ ಎಂದರು.

`ರಾಜಕೀಯ ಉಳಿವಿಗಾಗಿ ಷಡ್ಯಂತ್ರ ನಡೆಯುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೆಗಾಸಿಟಿ ಯೋಜನೆ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿದರು. ಇದರಲ್ಲಿ ನನ್ನ ಪಾತ್ರವಿಲ್ಲ ಎಂಬುದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ತನಿಖೆಗೆ ಆದೇಶಿಸಿದರು. ಆದರೆ ನಾನು ಆ ರೀತಿ ಸೇಡಿನ ರಾಜಕಾರಣ ಮಾಡುವುದಿಲ್ಲ. ಅಕ್ರಮಗಳನ್ನು ತಡೆಯಲು ಅಧಿಕಾರಿಗಳ ಬದಲಾವಣೆ ಸೇರಿದಂತೆ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲು ಕ್ರಮ ಕೈಗೊಳ್ಳುತ್ತೇನೆ~ ಎಂದರು.

`ಮೆಗಾಸಿಟಿ ಯೋಜನೆಯಲ್ಲಿ ಯಾವು ದೇ ರೀತಿಯ ಅವ್ಯವಹಾರ ಆಗಿಲ್ಲ. ಕಂದಾಯ ಭೂಮಿಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಕ್ರಿಮಿನಲ್ ಅಪರಾಧ ಎಸಗಿಲ್ಲ. 3-4 ದಿನಗಳ ಹಿಂದೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿಯಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದೇನೆ. ಅಲ್ಲದೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವಾಗಲೇ ಪ್ರಮಾಣ ಪತ್ರದಲ್ಲಿ ಈ ಎಲ್ಲ ಅಂಶಗಳನ್ನು ಉಲ್ಲೇಖಿಸಲಾಗಿತ್ತು. ಇದರಲ್ಲಿ ಮುಚ್ಚಿಡುವುದು ಏನೂ ಇಲ್ಲ~ ಎಂದು ಸ್ಪಷ್ಟಪಡಿಸಿದರು.

`ಆರೋಪಗಳಿಂದ ನಾನು ವಿಚಲಿತನಾಗಿಲ್ಲ. ಕೆಲವು ಪತ್ರಿಕೆಗಳು ಸತ್ಯಕ್ಕೆ ದೂರವಾದ ವರದಿಗಳನ್ನು ಪ್ರಕಟಿಸಿವೆ. ಆ ಪತ್ರಿಕೆಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ~ ಎಂದು ಸಚಿವರು ಸ್ಪಷ್ಟಪಡಿಸಿದರು.

ನಾಗರಹೊಳೆಗೆ ಆನೆಗಳ ಸ್ಥಳಾಂತರ
ಬೆಂಗಳೂರು:
ಹಾಸನ ಜಿಲ್ಲೆ ಸಕಲೇಶಪುರದ ಆಲೂರು ಸುತ್ತಮುತ್ತ ಇರುವ 25 ಆನೆಗಳನ್ನು ನಾಗರಹೊಳೆ ಭಾಗಕ್ಕೆ ಸ್ಥಳಾಂತರಿಸಲಾಗುವುದು ಎಂದು ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಹೇಳಿದರು.

ಆಲೂರು ಗ್ರಾಮದ ಸುತ್ತಮುತ್ತ ಆನೆಗಳ ಹಾವಳಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಒಂದು ವಾರದಲ್ಲಿ ಈ ಪ್ರಕ್ರಿಯೆ ಆರಂಭವಾಗಲಿದೆ. ಕೇಂದ್ರ ಸರ್ಕಾರವೂ ಇದಕ್ಕೆ ಅನುಮತಿ ನೀಡಿದೆ ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕ್ಯಾಂಪ್‌ಗಳಲ್ಲಿ ಒಟ್ಟು 81 ಆನೆಗಳಿವೆ. ಮಧ್ಯಪ್ರದೇಶ ಮತ್ತು ಒಡಿಶಾದಿಂದ ತಲಾ ಹತ್ತು ಆನೆಗಳಿಗೆ ಬೇಡಿಕೆ ಬಂದಿದ್ದು, ಪ್ರವಾಸೋದ್ಯಮದ ದೃಷ್ಟಿಯಿಂದ ಆನೆಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು.

ಸಂಚಾರಕ್ಕೆ ನಿರ್ಬಂಧ: ಮೈಸೂರು- ಊಟಿ ರಸ್ತೆಯ ಬಂಡೀಪುರ ಮಾರ್ಗದಲ್ಲಿ ಸದ್ಯ ರಾತ್ರಿ 9ರಿಂದ ಬೆಳಿಗ್ಗೆ 6 ಗಂಟೆವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಆದರೂ ವನ್ಯಜೀವಿಗಳಿಗೆ ತೊಂದರೆಯಾಗುತ್ತಿರುವುದರಿಂದ ಸಂಜೆ 6ರಿಂದ ಬೆಳಿಗ್ಗೆ 6 ಗಂಟೆವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು.

ಗುರುವಾರ ಆನೆ ಮರಿಯೊಂದು ಸತ್ತಿರುವ ಹಿನ್ನೆಲೆಯಲ್ಲಿ ಸಂಜೆ 6ರಿಂದಲೇ ವಾಹನಗಳ ಸಂಚಾರವನ್ನು ನಿರ್ಬಂಧಿಸುವುದು ಸೂಕ್ತ ಎಂಬುದು ಸರ್ಕಾರದ ಚಿಂತನೆ. ಆದಷ್ಟು ಬೇಗ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ತನಿಖೆ: ಕಳೆದ 6-7 ತಿಂಗಳಿಂದ ಬಿಳಿಗಿರಿರಂಗನ ಬೆಟ್ಟದಲ್ಲಿ ಏಳು ಹುಲಿಗಳು ಸತ್ತಿವೆ. ಉದ್ದೇಶಪೂರ್ವಕವಾಗಿ ಸಾಯಿಸಲಾಗುತ್ತಿದೆ ಎಂಬ ಸಂಶಯಗಳು ವ್ಯಕ್ತವಾಗಿವೆ. ಆದ್ದರಿಂದ ಇಲಾಖೆಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ತನಿಖೆಗೆ ಆದೇಶಿಸಲಾಗುವುದು ಎಂದು ಹೇಳಿದರು.

ಹಾನೆ ಹಾವಳಿ ನಷ್ಟಕ್ಕೆ 15 ದಿನದಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಪರಿಹಾರ ನೀಡಲಾಗಿದೆ. ಉಳಿದ ಕಡೆಯೂ ಆದಷ್ಟು ಬೇಗ ಪರಿಹಾರ ನೀಡಲಾಗುವುದು. ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT