ADVERTISEMENT

ಅರಣ್ಯ ಕಾವಲುಗಾರನಿಗೆ ವನ್ಯಮೃಗ ಸೇವೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಮೇ 2012, 19:05 IST
Last Updated 13 ಮೇ 2012, 19:05 IST
ಅರಣ್ಯ ಕಾವಲುಗಾರನಿಗೆ ವನ್ಯಮೃಗ ಸೇವೆ ಪ್ರಶಸ್ತಿ
ಅರಣ್ಯ ಕಾವಲುಗಾರನಿಗೆ ವನ್ಯಮೃಗ ಸೇವೆ ಪ್ರಶಸ್ತಿ   

ಬೆಂಗಳೂರು: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ನಲ್ಲೂರುಪಳ್ಳದ ಗೋವಿಂದ ಅವರು ರಾಜ್ಯ ಅರಣ್ಯ ಇಲಾಖೆಯನ್ನು ಸೇರಿದ್ದು 1984ರಲ್ಲಿ, ಅರಣ್ಯ ಕಾವಲುಗಾರನಾಗಿ. ಅಂದಿನಿಂದಲೂ ತನ್ನ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ವನ್ಯ ಮೃಗಗಳ ಬೇಟೆ, ಅರಣ್ಯ ಅತಿಕ್ರಮಣ ನಡೆಯದಂತೆ ನಿಗಾ ವಹಿಸುತ್ತಿರುವ ಗೋವಿಂದ ಅವರಿಗೆ ಖ್ಯಾತ ಕ್ರಿಕೆಟಿಗ ಹರಭಜನ್ ಸಿಂಗ್ ಅವರಿಂದ ಸನ್ಮಾನ ಮಾಡಿಸಿಕೊಳ್ಳುವ ಅವಕಾಶ ಭಾನುವಾರ ಒದಗಿತ್ತು.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೋವಿಂದ ಅವರಿಗೆ 2012ನೇ ಸಾಲಿನ  `ಹುಲಿ, ವನ್ಯಮೃಗಗಳ ಸೇವೆ ಪ್ರಶಸ್ತಿ~ ನೀಡಿ ಗೌರವಿಸಲಾಯಿತು. ಗೋವಿಂದ ಅವರು ತಮ್ಮ ಕರ್ತವ್ಯದ ಅವಧಿಯಲ್ಲಿ ಗುಂಡೇಟನ್ನೂ ತಿಂದಿದ್ದಾರೆ. ಅವರ ಎರಡೂ ಕಾಲುಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಗುಂಡು ಇದಕ್ಕೆ ಸಾಕ್ಷಿ ಎಂದು ಸನ್ಮಾನದ ಆಯೋಜಕರು ಹೇಳಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಹರಭಜನ್ ಸಿಂಗ್, `ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶದಲ್ಲಿ ಅಂದಾಜು 40 ಸಾವಿರ ಹುಲಿಗಳು ಇದ್ದವು. ನಂತರದ ದಿನಗಳಲ್ಲಿ ಅವ್ಯಾಹತವಾಗಿ ನಡೆದ ಹುಲಿ ಬೇಟೆಯ ಕಾರಣ, ಅವುಗಳ ಸಂಖ್ಯೆ ಆತಂಕಕಾರಿ ಪ್ರಮಾಣಕ್ಕೆ ಕುಸಿಯಿತು. ಹುಲಿ ಬೇಟೆಯನ್ನು ಅಪರಾಧ ಎಂದು ಪರಿಗಣಿಸುವ ಕಾನೂನು ರೂಪಿಸಲಾಗಿದ್ದರೂ, ಇದು ಸಂಪೂರ್ಣವಾಗಿ ನಿಂತಿಲ್ಲ~ ಎಂದು ವಿಷಾದಿಸಿದರು.

ದೇಶದಲ್ಲಿ ಪ್ರಸ್ತುತ ಕೇವಲ 1,700 ಹುಲಿಗಳು ಇವೆ ಎಂದು ಅಂದಾಜಿಸಲಾಗಿದೆ. ಹುಲಿಯ ವಾಸ ಸ್ಥಳವನ್ನು ಸಂರಕ್ಷಿಸುವ ಮೂಲಕ, ಅವುಗಳ ಸಂಖ್ಯೆಯನ್ನೂ ಹೆಚ್ಚಿಸಬಹುದು. ಒಂದಿಷ್ಟು ಮಂದಿ ಕ್ರಿಕೆಟಿಗರೂ ಸೇರಿಕೊಂಡು, ಜನರಲ್ಲಿ ವನ್ಯಮೃಗಗಳ ಬಗ್ಗೆ ಪ್ರೀತಿ ಹುಟ್ಟಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. 

ಸಣ್ಣ ಕೈಗಾರಿಕಾ ಸಚಿವ ರಾಜೂಗೌಡ, ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನುರ್ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.