ADVERTISEMENT

ಅರಮನೆ ಮೈದಾನ- ವಾಣಿಜ್ಯ ಬಳಕೆ ಸಲ್ಲ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST

ಬೆಂಗಳೂರು: ವಸ್ತು ಪ್ರದರ್ಶನ, ಮಾರಾಟ ಸೇರಿದಂತೆ ಯಾವುದೇ ವಾಣಿಜ್ಯ ಬಳಕೆಗೆ ನಗರದ ಅರಮನೆ ಮೈದಾನದಲ್ಲಿ ಇನ್ನು ಮುಂದೆ ಪ್ರವೇಶ ನಿಷಿದ್ಧ. ವಿವಾಹ, ರ‌್ಯಾಲಿ, ರಾಜಕೀಯ ಸಭೆ ನಡೆಸುವವರಿಗೆ ಮಾತ್ರ ಮೈದಾನ ಸೀಮಿತ.

ಜೂನ್ 26ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರೂಪಿಸಿರುವ ಮಾರ್ಗಸೂಚಿ ಇದು. ಈ ಮಾರ್ಗಸೂಚಿಯನ್ನು ಶೀಘ್ರದಲ್ಲೇ ಸರ್ಕಾರ ಜಾರಿ ಮಾಡಲಿದೆ. 2001ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಆಧಾರದ ಮೇಲೆ ಈ ಮಾರ್ಗಸೂಚಿ ರೂಪಿಸಲಾಗಿದೆ.

ವಾಣಿಜ್ಯ ಚಟುವಟಿಕೆ ಬಿಟ್ಟು ಬೇರೆ ಉದ್ದೇಶಗಳಿಗೆ ಮೈದಾನದಲ್ಲಿ ಅನುಮತಿ ನೀಡಲು ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದ್ದರೂ, ಎರಡು ತಿಂಗಳಿನಿಂದ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡದ ಇಲಾಖೆಯ ವಿರುದ್ಧ ಅಲ್ಲಿಯ ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. `ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಅಧಿಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದ ಏಕಗವಾಕ್ಷಿ ಸಮಿತಿಗೆ ಇದೆ. ಎರಡು ತಿಂಗಳಿನಿಂದ ಯಾವುದೇ ಅನುಮತಿಯನ್ನು ಸಮಿತಿ ನೀಡಿಲ್ಲ. ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಈ ರೀತಿ ಮಾಡುತ್ತಿರುವುದು ಸರಿಯಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಾಣಿಜ್ಯ ಚಟುವಟಿಕೆಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಗಳ ಆದಾಯ ಬರುತ್ತಿತ್ತು. ಏಪ್ರಿಲ್‌ನಿಂದ  ವಾಣಿಜ್ಯ ತೆರಿಗೆ ಕೂಡ ಸರ್ಕಾರ ವಿಧಿಸುತ್ತಿದ್ದ ಕಾರಣ, ಎರಡು ತಿಂಗಳಿನಲ್ಲಿಯೇ ಸುಮಾರು 25 ಲಕ್ಷ ರೂಪಾಯಿ ಬೊಕ್ಕಸಕ್ಕೆ ಜಮಾ ಆಗಿತ್ತು. ಈ ಮಾರ್ಗಸೂಚಿಯಿಂದ ಸರ್ಕಾರ ನಷ್ಟ ಅನುಭವಿಸಲಿದೆ ಎಂಬ ಮಾಹಿತಿಯನ್ನು ಮೂಲಗಳು ತಿಳಿಸಿವೆ.

ಮಾರ್ಗಸೂಚಿಗಳು
ಕಾರ್ಯಕ್ರಮಗಳು ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ 1996ಕ್ಕೆ ಅನುಗುಣವಾಗಿ ಇರಬೇಕು.

ಮೈದಾನಕ್ಕೆ ಧಕ್ಕೆ ಆಗಬಾರದು.

ರಾತ್ರಿ 10ರ ನಂತರ ಧ್ವನಿವರ್ಧಕ ಬಳಕೆ ಇಲ್ಲ

ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ `ಬೆಸ್ಕಾಂ~ನಿಂದ ವಿಶೇಷ ಅನುಮತಿ ಪಡೆದುಕೊಳ್ಳಬೇಕು.

ತ್ಯಾಜ್ಯ ವಸ್ತುಗಳನ್ನು ಶುಚಿಗೊಳಿಸಲು ಪ್ರತ್ಯೇಕ ಸೌಲಭ್ಯ ಕಲ್ಪಿಸಬೇಕು ಅಥವಾ ಲೋಡ್ ಒಂದಕ್ಕೆ ಪಾಲಿಕೆಗೆ 5 ಸಾವಿರ ರೂಪಾಯಿ ನೀಡಬೇಕು.

ವಾಹನ ಸಂಚಾರಕ್ಕೆ ತೊಂದರೆ ಆಗಬಾರದು.

ಸರ್ಕಾರಿ ಅಧಿಕಾರಿಗಳು ತಪಾಸಣೆಗೆ ಬಂದರೆ ಅವರಿಗೆ ಸಹಕರಿಸಬೇಕು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಭದ್ರತೆಗೆ ಆಯೋಜಕರು ಕ್ರಮ ತೆಗೆದುಕೊಳ್ಳಬೇಕು.

ಮದ್ಯ ಪೂರೈಕೆ ಅಥವಾ ಕಾನೂನು ಬಾಹಿರ ಚಟುವಟಿಕೆ ನಡೆಸಕೂಡದು.

ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸುವ ಸಂದರ್ಭಗಳಲ್ಲಿ ಅವರ ಭದ್ರತೆಗಾಗಿ ಪೊಲೀಸರಿಗೆ ಮುಂಚೆಯೇ ಮಾಹಿತಿ ನೀಡಿರಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT