ADVERTISEMENT

ಅರೆಸೇನಾ ಪಡೆ ಸಿಬ್ಬಂದಿ ಸೋಗಿನಲ್ಲಿ ₹50 ಲಕ್ಷ ಕದ್ದರು

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:58 IST
Last Updated 10 ಮೇ 2018, 19:58 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಬೆಂಗಳೂರು: ಅರೆಸೇನಾ ಪಡೆಯ ಸಿಬ್ಬಂದಿ ಸೋಗಿನಲ್ಲಿ ದುಷ್ಕರ್ಮಿಗಳಿಬ್ಬರು, ಧನುಷ್ ಎಂಬುವರಿಂದ ₹50 ಲಕ್ಷ ಕದ್ದುಕೊಂಡು ಪರಾರಿಯಾಗಿದ್ದಾರೆ.

ಚಿತ್ರದುರ್ಗದ ಧನುಷ್, ಹಣದ ಬ್ಯಾಗ್ ಸಮೇತ ಮೇ 9ರಂದು ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಿದ್ದರು. ಅವರ ಬಳಿ ಹೋಗಿದ್ದ ದುಷ್ಕರ್ಮಿಗಳು, ‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ನಿಮ್ಮ ಬ್ಯಾಗ್‌ ಪರಿಶೀಲನೆ ಮಾಡಬೇಕಿದೆ’ ಎಂದಿದ್ದರು. ಅದನ್ನು ನಂಬಿ ಬ್ಯಾಗ್‌ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.

ಹಣ ನೋಡಿದ ಆರೋಪಿಗಳು, ‘ಇದನ್ನು ಎಲ್ಲಿಂದ ತಂದಿದ್ದಿಯಾ. ಹಣ ಸಾಗಣೆ ಆರೋಪದಡಿ ನಿನ್ನನ್ನು ಬಂಧಿಸುತ್ತೇವೆ’ ಎಂದು ಹೇಳಿ ಧನುಷ್‌ರನ್ನು ಉಪ್ಪಾರಪೇಟೆ ಠಾಣೆಯವರೆಗೆ ಕರೆತಂದಿದ್ದರು. ಠಾಣೆ ಎದುರೇ ಕುಳಿತುಕೊಳ್ಳುವಂತೆ ಹೇಳಿ ಹಣದ ಬ್ಯಾಗ್‌ ಸಮೇತ ಹೊರಟು ಹೋಗಿದ್ದಾರೆ.

ADVERTISEMENT

ಅರ್ಧ ಗಂಟೆಯಾದರೂ ಆರೋಪಿಗಳು ವಾಪಸ್‌ ಬಾರದಿದ್ದಾಗ ಧನುಷ್, ಠಾಣೆಯೊಳಗೆ ಹೋಗಿ ವಿಚಾರಿಸಿದ್ದರು. ಅವಾಗಲೇ ಮೋಸ ಹೋಗಿದ್ದು ಗೊತ್ತಾಗಿದೆ. ನಂತರ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದರು.

‘ಸ್ನೇಹಿತ ಶಂಕರ್‌, ಹಿರಿಯೂರಿನಲ್ಲಿ ಹಾರ್ಡ್‌ವೇರ್‌ ಮಳಿಗೆ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಮಂಜುನಾಥ್‌ ಎಂಬುವರಿಂದ ಹಣ ಪಡೆದುಕೊಂಡು ಬರುವಂತೆ ಶಂಕರ್‌ ಹೇಳಿದ್ದರು. ಹೀಗಾಗಿ, ನಗರಕ್ಕೆ ಬಂದಿದ್ದೆ. ಹಣ ಪಡೆದುಕೊಂಡು ವಾಪಸ್‌ ಊರಿಗೆ ಹೋಗಲು ನಿಲ್ದಾಣಕ್ಕೆ ಬಂದಾಗಲೇ ಈ ಘಟನೆ ನಡೆದಿದೆ’ ಎಂದು ಧನುಷ್‌ ದೂರಿನಲ್ಲಿ ತಿಳಿಸಿದ್ದಾರೆ.

ಉಪ್ಪಾರಪೇಟೆ ಪೊಲೀಸರು, ‘ಆರೋಪಿಗಳು ಸಮವಸ್ತ್ರದಲ್ಲೇ ಧನುಷ್‌ರನ್ನು ಹಿಂಬಾಲಿಸಿ ಕೃತ್ಯ ಎಸಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.