ADVERTISEMENT

ಅರ್ಹರಿಗೆ ನ. 15ರೊಳಗೆ ಪಡಿತರ ಚೀಟಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ಬೆಂಗಳೂರು:  ಮುಂದಿನ ತಿಂಗಳ 15ರ ಒಳಗೆ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಡಿ.ಎನ್.ಜೀವರಾಜ್ ಶುಕ್ರವಾರ ಇಲ್ಲಿ ತಿಳಿಸಿದರು.

37.69 ಲಕ್ಷ ಅರ್ಜಿದಾರರು ಈಗಾಗಲೇ ಭಾವಚಿತ್ರ ಹಾಗೂ ಬೆರಳಚ್ಚು ಗುರುತು ನೀಡಿದ್ದಾರೆ. ಈ ಪೈಕಿ ಶೇ 50ರಷ್ಟು ಮಂದಿಗೆ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಉಳಿದವರಿಗೆ ನ.15ರ ಒಳಗೆ ನೀಡಲು ತೀರ್ಮಾನಿಸಲಾಗಿದೆ. ತಡ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ಈ ಹಿಂದೆ ತಾತ್ಕಾಲಿಕ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವವರು ಇದೇ 20ರ ಒಳಗೆ ಅರ್ಜಿ ಸಲ್ಲಿಸಿ ಕಾಯಂ ಪಡಿತರ ಚೀಟಿ ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಇದನ್ನು ಪಾಲಿಸದೆ ಇದ್ದರೆ ತಾತ್ಕಾಲಿಕ ಪಡಿತರ ಚೀಟಿಗಳಿಗೆ ಪೂರೈಸುವ ಆಹಾರಧಾನ್ಯಗಳನ್ನು ತಡೆಹಿಡಿಯಲಾಗುವುದು ಎಂದರು.

ರಾಜ್ಯದಲ್ಲಿ ಒಟ್ಟು 1.71 ಕೋಟಿ ಪಡಿತರ ಚೀಟಿಗಳನ್ನು ಹಂಚಿಕೆ ಮಾಡಲಾಗಿತ್ತು. ತಪಾಸಣೆ ನಂತರ ನಕಲಿ ಎಂದು ಕಂಡ ಬಂದ ಹಿನ್ನೆಲೆಯಲ್ಲಿ 33 ಲಕ್ಷ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಪ್ರಸ್ತುತ 99.58 ಲಕ್ಷ ಬಿಪಿಎಲ್ ಹಾಗೂ 39.18 ಲಕ್ಷ ಎಪಿಎಲ್ ಕಾರ್ಡ್‌ಗಳು ಚಾಲ್ತಿಯಲ್ಲಿವೆ ಎಂದರು.

ರಾಜ್ಯದಲ್ಲಿ ಒಟ್ಟು 29,499 ನ್ಯಾಯಬೆಲೆ ಅಂಗಡಿಗಳಿವೆ. ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ತುಮಕೂರು ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೇ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಅಳವಡಿಸಲಾಗಿದೆ.

ಮುಂದಿನ ಮಾರ್ಚ್ ಒಳಗೆ ಐದು ಸಾವಿರ ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರ ಅಳವಡಿಸುವ ಉದ್ದೇಶವಿದೆ. ಹಂತ ಹಂತವಾಗಿ ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಯಂತ್ರಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು.

ಆಹಾರ ಧ್ಯಾನಗಳ ಸಬ್ಸಿಡಿಗಾಗಿ ರಾಜ್ಯ ಸರ್ಕಾರ ರೂ 80 ಕೋಟಿ ವೆಚ್ಚ ಮಾಡುತ್ತಿದೆ. ಅಡುಗೆ ಅನಿಲ ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ಪೂರೈಸುವ ಉದ್ದೇಶ  ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

10ರ ಗಡುವು
ಇನ್ನು ಮುಂದೆ ಆಯಾ ತಿಂಗಳ ಹತ್ತರ ಒಳಗೆ ಅಕ್ಕಿ, ಸೀಮೆ ಎಣ್ಣೆ ಪಡೆದುಕೊಳ್ಳುವುದು ಕಡ್ಡಾಯ. ಗ್ರಾಹಕರ ಹಿತದೃಷ್ಟಿಯಿಂದ ಈ ರೀತಿ ಮಾಡಲಾಗಿದೆ. ತಿಂಗಳು ಪೂರ್ತಿ ನ್ಯಾಯಬೆಲೆ ಅಂಗಡಿ ತೆರೆದಿರುವುದಿಲ್ಲ. ಕೆಲವೇ ದಿನಗಳಲ್ಲಿ ಆಹಾರ ಧಾನ್ಯಗಳು ಖಾಲಿಯಾಗಿರುತ್ತವೆ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕಾಲಮಿತಿ ನಿಗದಿ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.