ADVERTISEMENT

ಅವ್ಯವಹಾರ: ಅರ್ಜಿ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಅರ್ಥ್ ಮೂವರ್ಸ್‌ ಲಿಮಿಟೆಡ್‌ನಲ್ಲಿ (ಬಿಇಎಂಎಲ್) ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಆರೋಪ ಹೊತ್ತ ಅದರ ವ್ಯವಸ್ಥಾಪಕ ನಿರ್ದೇಶಕ ಹಾಗೂ ಇತರ ಉನ್ನತ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ದೂರಿ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್ ಬುಧವಾರ ಇತ್ಯರ್ಥಗೊಳಿಸಿದೆ.

ದೂರು ದಾಖಲಾತಿಗೆ ಸಂಬಂಧಿಸಿದ ವಿಚಾರಣೆ ನಡೆಸುವುದು ಹೈ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿತ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.

ಅವ್ಯವಹಾರದ ಪ್ರಾಥಮಿಕ ತನಿಖೆ ನಡೆಸಿದ ಮಹಾಲೇಖಪಾಲರು ಕೆಳ ಹಂತದ ಅಧಿಕಾರಿಗಳ ಹೆಸರನ್ನು ಮಾತ್ರ ಬಹಿರಂಗಗೊಳಿಸಿದ್ದು, ವ್ಯವಸ್ಥಾಪಕ ನಿರ್ದೇಶಕರಾಗಿರುವ ವಿ.ಆರ್. ಎಸ್. ನಟರಾಜನ್ ಹಾಗೂ ಇತರರ ವಿರುದ್ಧ ಯಾವುದೇ ಮಾಹಿತಿ ನೀಡಲಿಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ಕೂಡ ಚರ್ಚೆಯಾಗಿದೆ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎನ್ನುವುದು ಅರ್ಜಿದಾರರಾದ ಸುಬ್ರಹ್ಮಣ್ಯ ಅವರ ಆರೋಪವಾಗಿತ್ತು.

ನಾಮಪತ್ರ ಸಲ್ಲಿಕೆ ವಿವಾದ
ನಗರದ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್‌ಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಸ್ಥಾಪಕ ಸದಸ್ಯರಾದ ಬಿ.ವಿ.ಮಲ್ಲಾರೆಡ್ಡಿ ಹಾಗೂ ಡಿ.ಆರ್.ಗೋಪಿನಾಥ ಅವರಿಗೆ ನೀಡಿರುವ ಅನುಮತಿ ರದ್ದು ಮಾಡಿ ಹೈಕೋರ್ಟ್ ಬುಧವಾರ ಆದೇಶಿಸಿದೆ. ಪ್ರಾಥಮಿಕ ಸದಸ್ಯದಿಂದ ತೆಗೆದುಹಾಕಿದ್ದನ್ನು ಏಕಸದಸ್ಯಪೀಠ ಎತ್ತಿಹಿಡಿದ ಕ್ರಮ ಪ್ರಶ್ನಿಸಿ ಇಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಇತ್ಯರ್ಥಗೊಳಿಸಿದೆ.

ಒಂದು ವೇಳೆ ಇವರು ನಾಮಪತ್ರ ಸಲ್ಲಿಸಿದರೆ, ಅದನ್ನು ಸ್ವೀಕರಿಸುವಂತೆ ಬ್ಯಾಂಕ್‌ಗೆ ಪೀಠ ಕಳೆದ ಬಾರಿ ಸೂಚಿಸಿತ್ತು. ಆದರೆ ಇದಕ್ಕೆ ಬ್ಯಾಂಕ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಅರ್ಜಿದಾರರು ಮನವಿ ಮಾಡಿಕೊಳ್ಳುವ ಬದಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಸರಿಯಲ್ಲ ಎಂದರು. ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.