ADVERTISEMENT

ಅಹಿಂಸಾ ತತ್ವವೇ ರಾಮಬಾಣ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ಬೆಂಗಳೂರು: `ರೋಗಗ್ರಸ್ತ ಜಗತ್ತಿಗೆ ಭಗವಾನ್ ಮಹಾವೀರರ ಅಹಿಂಸಾ ತತ್ವವೇ ರಾಮಬಾಣ~ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅಭಿಪ್ರಾಯಪಟ್ಟರು.

ಕರ್ನಾಟಕ ಜೈನ ಅಸೋಸಿಯೇಷನ್, ಬೆಂಗಳೂರು ಜೈನ ಸಮಾಜ ಹಾಗೂ ಮೋತೀಖಾನೆ ತಿಮ್ಮಪ್ಪಯ್ಯ ಜೈನ ವಿದ್ಯಾರ್ಥಿ ನಿಲಯದ ಆಶ್ರಯದಲ್ಲಿ ಶಂಕರಪುರಂ ಕೆ.ಆರ್. ರಸ್ತೆ ಕರ್ನಾಟಕ ಜೈನ ಅಸೋಸಿಯೇಶನ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಭಗವಾನ್ ಮಹಾವೀರ ಸ್ವಾಮಿ ಜಿನಮಂದಿರದ ಆರನೇ ವಾರ್ಷಿಕೋತ್ಸವ, ಮಹಾವೀರ ಜಯಂತಿ ಮಹೋತ್ಸವ, ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ವಿಜೇತರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ಲೇಖಕಿ ಕಮಲಾ ಹಂಪನಾ ಸನ್ಮಾನ ಸ್ವೀಕರಿಸಿ, `ಹೆಣ್ಣು ಮಕ್ಕಳಿಗೆ ಸಮಾನತೆ ನೀಡಿದ ಪ್ರಥಮ ಧರ್ಮ ಜೈನ ಧರ್ಮ~ ಎಂದು ಬಣ್ಣಿಸಿದರು.

ಮಹಾವೀರ ಜಯಂತಿ ಬಗ್ಗೆ ಲೇಖಕ ಡಾ. ಶಾಂತಿನಾಥ ದಿಬ್ಬದ ಉಪನ್ಯಾಸ ನೀಡಿದರು.
ಕಂಬದಹಳ್ಳಿ ದಿಗಂಬರ ಜೈನ ಮಠದ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಜೈನ ಅಸೋಸಿಯೇಶನ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
 
ಈ ಸಂದರ್ಭ ಡಾ. ಶಾಂತಿನಾಥ ದಿಬ್ಬದ, ಪ್ರೊ.ಕಮಲಾ ಹಂಪನಾ, ಆದಿಶಂಕರಾಚಾರ್ಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪಿ.ಎಸ್. ಧರಣೆಪ್ಪನವರ, ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ಆನಂದ ಕುಮಾರ್ ಮಗ್ದುಂ, ವನ್ಯಜೀವಿ ಸಂಶೋಧಕ ಸಂಜಯ್ ಗುಬ್ಬಿ, ನೃತ್ಯಪಟು ಅಧಿತಿ ಅಶೋಕ್ ಅವರನ್ನು ಸನ್ಮಾನಿಸಲಾಯಿತು.

ಎಸ್‌ಪಿಎಂಎಲ್ ಮುಖ್ಯಸ್ಥ ಅನಿಲ್ ಸೇಠಿ ಉಪಸ್ಥಿತರಿದ್ದರು. ಬೆಳಿಗ್ಗೆಯಿಂದ ಜಿನಮಂದಿರದಲ್ಲಿ ಮಹಾವೀರ ಸ್ವಾಮೀಜಿಗೆ ನವಕಳಶಾಭಿಷೇಕ, ಪಂಚಾಮೃತ ಪೂಜೆ, ಉತ್ಸವ, 108 ಕಳಶ ಸಹಿತ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮದ ಬಳಿಕ ಅಶೋಕ್ ಕುಮಾರ್ ನಾಟ್ಯಾಂಜಲಿ ತಂಡದವರಿಂದ ನೃತ್ಯ ರೂಪಕ ಪ್ರದರ್ಶಿತಗೊಂಡಿತು. 

ದಿಗಂಬರ ಜೈನ ಸಮಾಜ: ವಿಲ್ಸನ್ ಗಾರ್ಡನ್‌ನ ಖಂಡೇಲ್‌ವಾಲ್ ದಿಗಂಬರ ಜೈನ ಸಮಾಜದ ಆಶ್ರಯದಲ್ಲಿ ಮಹಾವೀರ ಜಯಂತಿ ದಿಗಂಬರ ಜೈನ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭ ಆಯೋಜಿಸಿದ್ದ ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಮಹಾವೀರ ಸ್ವಾಮೀಜಿಗೆ ಮಹಾಮಸ್ತಕಾಭಿಷೇಕ ಹಾಗೂ ವಿಶೇಷ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಂಜೆ ವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.