ADVERTISEMENT

‘ಅಹಿಂಸೆ ವ್ಯಾಖ್ಯಾನ ಬದಲಾಗಬೇಕಿದೆ’

ಟಿ.ಎನ್‌.ಕೋಶು ಸ್ಮಾರಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 20:12 IST
Last Updated 1 ಡಿಸೆಂಬರ್ 2017, 20:12 IST
ಅಶೋಕ ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆಯ ಟ್ರಸ್ಟಿಗಳಾದ ರಾಜೀವ್ ಕೋಶೊ(ಎಡಗಡೆ) ಮತ್ತು ಪ್ರೊ.ಕಮಲ್ ಜೀತ್ ಭಾವ (ಬಲಗಡೆ) ಅವರು ಸೋನಮ್‌ ವಾಂಗ್‌ಚುಕ್‌ ಅವರಿಗೆ ‘14ನೇ ಟಿ.ಎನ್ ಕೋಶೊ ಸ್ಮಾರಕ ಪ್ರಶಸ್ತಿ’ ಪ್ರದಾನ ಮಾಡಿದರು
ಅಶೋಕ ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆಯ ಟ್ರಸ್ಟಿಗಳಾದ ರಾಜೀವ್ ಕೋಶೊ(ಎಡಗಡೆ) ಮತ್ತು ಪ್ರೊ.ಕಮಲ್ ಜೀತ್ ಭಾವ (ಬಲಗಡೆ) ಅವರು ಸೋನಮ್‌ ವಾಂಗ್‌ಚುಕ್‌ ಅವರಿಗೆ ‘14ನೇ ಟಿ.ಎನ್ ಕೋಶೊ ಸ್ಮಾರಕ ಪ್ರಶಸ್ತಿ’ ಪ್ರದಾನ ಮಾಡಿದರು   

ಬೆಂಗಳೂರು: ‘ಅನೇಕ ಸಮುದಾಯಗಳು ಪ್ರಾಣಿ ಹಿಂಸೆ ಮಾಡಬಾರದು ಎನ್ನುವುದನ್ನೇ ಅಹಿಂಸಾ ವ್ರತ ಎಂದು ಆಚರಿಸುತ್ತಿದ್ದಾರೆ. ಆದರೆ, ಪರಿಸರಕ್ಕೆ ಮಾರಕವಾಗುವ ಜೀವನ ಶೈಲಿ ಅಳವಡಿಸಿಕೊಂಡಿರುತ್ತಾರೆ. ಈ ನಿಟ್ಟಿನಲ್ಲಿ ಅಹಿಂಸೆಯ ವ್ಯಾಖ್ಯಾನ ಬದಲಾಗಬೇಕು’ ಎಂದು ಸ್ಟೂಡೆಂಟ್‌ ಎಜುಕೇಶನ್‌ ಎಂಡ್ ಕಲ್ಚರಲ್‌ ಮೂಮೆಂಟ್‌ ಆಫ್‌ ಲಡಾಕ್‌ ಸಂಸ್ಥೆಯ ಸಂಸ್ಥಾಪಕ ಸೋನಮ್‌ ವಾಂಗ್‌ಚುಕ್ ಅಭಿಪ್ರಾಯಪಟ್ಟರು.

ಅಶೋಕ ಪರಿಸರ ಮತ್ತು ಪರಿಸರ ವಿಜ್ಞಾನ ಸಂಶೋಧನ ಸಂಸ್ಥೆ ಐಐಎಸ್ಸಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2017ನೇ ಸಾಲಿನ ‘ಟಿ.ಎನ್‌. ಕೋಶೊ ಸ್ಮಾರಕ ಪ್ರಶಸ್ತಿ’  ಸ್ವೀಕರಿಸಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಟಿ.ಎನ್‌.ಕೋಶೊ ಸ್ಮಾರಕ ಪ್ರಶಸ್ತಿ ನೀಡಲಾಗುತ್ತದೆ. ಈವರೆಗೆ 17 ಜನರಿಗೆ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯು ₹1 ಲಕ್ಷ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಹೊಂದಿದೆ.

ADVERTISEMENT

‘ವಲ್ಡ್‌ ವೈಲ್ಡ್‌ಲೈಫ್‌ ಫಂಡ್‌  (ಡಬ್ಲೂಡಬ್ಲೂಎಫ್‌) 2014ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ 1970ರಿಂದ 2010ರವರೆಗೆ (40 ವರ್ಷ) ವನ್ಯಜೀವಿಗಳ ಸಂಖ್ಯೆ ಶೇ 52ರಷ್ಟು ಕಡಿಮೆಯಾಗಿದೆ. ಇದಕ್ಕೆ ನೀಡಿರುವ ಕಾರಣಗಳಲ್ಲಿ ಆಹಾರಕ್ಕೆ ಪ್ರಾಣಿಗಳನ್ನು ಕೊಲ್ಲುವುದು 26ನೇ ಕಾರಣವಾಗಿದೆ. ಮೊದಲ ಮೂರು ಸ್ಥಾನಗಳಲ್ಲಿರುವುದು ವಾಹನಗಳು, ಮಾಲಿನ್ಯ ಮತ್ತು ಜೀವನಶೈಲಿ’ ಎಂದು ವಿವರಿಸಿದರು.

‘ಪ್ಲಾಸ್ಟಿಕ್‌ ಬಳಸುವುದಿಲ್ಲ, ಮರಗಳನ್ನು ಕಡಿಯುವುದಿಲ್ಲ... ಹೀಗೆ ಪರಿಸರ ಸ್ನೇಹಿ ಜೀವನ ಶೈಲಿ ಅಳವಡಿಸಿಕೊಳ್ಳುವುದು ನಮ್ಮ ಅಹಿಂಸಾ ವ್ರತವಾಗಬೇಕು. ಅಗತ್ಯವಿಲ್ಲದೆ ಎಸ್ಕಿಲೇಟರ್‌ ಬಳಸುವುದಿಲ್ಲ ಹಾಗಾಗಿ ನಾನು ಹಿಂದು, ಪ್ಲಾಸ್ಟಿಕ್‌ ಬಳಕೆ ಮಾಡುವುದಿಲ್ಲವಾದ್ದರಿಂದ ನಾನು ಜೈನ್‌... ಈ ದೃಷ್ಟಿಕೋನದಲ್ಲಿ ಧರ್ಮಗಳ ತತ್ವ ರೂಪಗೊಳ್ಳಬೇಕು’ ಎಂದರು.

‘ನಮ್ಮ ಮಕ್ಕಳು ಕಾಲು ಜೀವ ಮಾನವನ್ನು ಶಿಕ್ಷಣಕ್ಕಾಗಿ ಕಳೆಯುತ್ತಾರೆ. ಆ ಶಿಕ್ಷಣ ವ್ಯವಸ್ಥೆಯೇ ಸರಿಯಿಲ್ಲ. ಅವರಿಗೆ ಪ್ರಕೃತಿಯಿಂದ ಪಡೆಯುವುದನ್ನಷ್ಟೇ ಕಲಿಸುತ್ತಿದ್ದೇವೆ, ಕಾಪಾಡುವ ಬಗ್ಗೆ ಹೇಳಿಕೊಟ್ಟಿಲ್ಲ. ಹೀಗಾಗಿ ಪ್ರಾಕೃತಿಕ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.