ADVERTISEMENT

ಆಂಗ್ಲೋ ಇಂಡಿಯನ್‌ ಸದಸ್ಯರಾಗಿ ವಿನಿಷಾ ನೇರೋ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2013, 19:30 IST
Last Updated 22 ಡಿಸೆಂಬರ್ 2013, 19:30 IST

ಬೆಂಗಳೂರು: ನಗರದ ಆಂಗ್ಲೋ ಇಂಡಿಯನ್ನರ ಸಂಘದ ಸದಸ್ಯೆ ವಿನಿಷಾ ನೇರೋ ಅವರನ್ನು ಆಂಗ್ಲೋ ಇಂಡಿಯನ್‌ ಕೋಟಾದಡಿ ವಿಧಾನಸಭಾ ಸದಸ್ಯರನ್ನಾಗಿ ನಾಮಕರಣ ಮಾಡುವ ಪ್ರಸ್ತಾವಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಸೋಮವಾರ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ.

ಆಂಗ್ಲೋ ಇಂಡಿಯನ್‌ ಸದಸ್ಯರನ್ನು ನಾಮಕರಣ ಮಾಡುವ ಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡುವ ನಿರ್ಧಾರವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಬಳಿಕ ಸಿದ್ದರಾಮಯ್ಯ ಅವರು, ವಿನಿಷಾ ನೇರೋ ಅವರನ್ನು ವಿಧಾನಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡುವಂತೆ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಅವರಿಗೆ ಪ್ರಸ್ತಾವ ಕಳುಹಿಸಿದ್ದರು. ಅವರು ಅದಕ್ಕೆ ಅಂಕಿತ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಪಾಲರ ಅಂಕಿತದ ಬಳಿಕ, ನೇರೋ ಅವರ ನಾಮಕರಣ ಕುರಿತು ಅಧಿಸೂಚನೆ ಹೊರಡಿಸುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಪ್ರಸ್ತಾವನ್ನು ಕಳುಹಿಸಲಾಗಿದೆ. ಸೋಮವಾರ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ. 2004ರಲ್ಲಿ ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌–ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದಾಗ ಐವಾನ್‌ ನಿಗ್ಲಿ ಅವರನ್ನು ವಿಧಾನಸಭೆಗೆ ನಾಮಕರಣ ಮಾಡಲಾಗಿತ್ತು.

ಈ ಬಾರಿಯೂ ನಿಗ್ಲಿ ಅವರಿಗೇ ಅವಕಾಶ ನೀಡಲು ರಾಜ್ಯ ಕಾಂಗ್ರೆಸ್‌ ಮುಖಂಡರು ನಿರ್ಧರಿಸಿದ್ದರು. ಆದರೆ, ಆಂಗ್ಲೋ ಇಂಡಿಯನ್‌ ಕೋಟಾದಡಿ ಮಹಿಳೆಗೆ ಅವಕಾಶ ನೀಡುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸ್ಪಷ್ಟವಾದ ಸೂಚನೆ ನೀಡಿದ ಕಾರಣದಿಂದ ನೇರೋ ಅವರನ್ನು ನಾಮಕರಣ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ವಿನಿಷಾ ಅವರು ಆಂಗ್ಲೋ ಇಂಡಿಯನ್‌ ಸಂಘದ ಸಕ್ರಿಯ ಸದಸ್ಯರಾಗಿದ್ದು, ಬೆಂಗಳೂರು ಶಾಖೆಯ ಗೌರವ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT