ADVERTISEMENT

ಆಕಸ್ಮಿಕಕ್ಕೆ ಬಲಿಯಾಗದ ಅದೃಷ್ಟವಂತರು!

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಶರವೇಗದಲ್ಲಿ ಮನೆಯೊಳಗೆ ನುಗ್ಗಲು ಯತ್ನಿಸಿದ ಜವರಾಯ ಅಕ್ಷರಶಃ ಸೋತು ಕುಸಿದ ಕ್ಷಣವದು, ಮನೆಯಲ್ಲಿದ್ದ ಮಹಿಳೆಯರು ಬದುಕಿದೆವು ಎಂದು ನಿಟ್ಟುಸಿರು ಬಿಡುತ್ತಿದ್ದರೇ ಒಂದು ವರ್ಷದ ಮಗು ಮಾತ್ರ ಏನೂ ಆಗದಂತೆ ಆಡವಾಡುತ್ತಲೇ ಇತ್ತು.

ಹೀಗೆ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದವರು ಲಕ್ಷ್ಮಿದೇವಮ್ಮ, ಅವರ ಸೊಸೆ ಪಲ್ಲವಿ ಮತ್ತು ಒಂದು ವರ್ಷದ ಮೊಮ್ಮಗ ಚಿರು. ಸಿಲಿಂಡರ್ ಸ್ಫೋಟ ಸಂಭವಿಸಿದ ಲಕ್ಷ್ಮಿವೆಂಕಟೇಶ್ವರ ಕನ್ವೆನ್ಷನ್ ಹಾಲ್  ಕಲ್ಯಾಣ ಮಂಟಪದಿಂದ ನೂರು ಅಡಿ ಅಂತರದಲ್ಲಿ ಅವರ ಮನೆ ಇದೆ. ಲಕ್ಷ್ಮಿದೇವಮ್ಮ ಅವರು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮೊಮ್ಮಗನನ್ನು ಆಟವಾಡಿಸುತ್ತಾ ಮಂಚದ ಮೇಲೆ (ದಿವಾನ್ ಕಾಟ್) ಕುಳಿತಿದ್ದರು. ಆಗಲೇ ಅವರಿಗೆ ಭಾರಿ ಸ್ಫೋಟದ ಶಬ್ಧ ಕೇಳಿಸಿದೆ. ಏನಾಯ್ತು ಎಂದುಕೊಳ್ಳುವಷ್ಟರಲ್ಲೇ ಸಿಮೆಂಟ್ ಇಟ್ಟಿಗೆಗಳು (ಹ್ಯಾಲೊ ಬ್ರಿಕ್) ಅವರ ಮನೆ ಬಾಗಿಲಿಗೆ ಅಪ್ಪಳಿಸಿದವು. ಅದರ ತೀವ್ರತೆಗೆ ಬಾಗಿಲು ತುಂಡಾಯಿತು. ಇನ್ನೂ ಕೆಲವು ಇಟ್ಟಿಗೆಗಳು ರೆಫ್ರಿಜರೇಟರ್‌ಗೆ ತಗುಲಿದವು. ಇಟ್ಟಿಗೆ ಕಿಟಕಿಗೆ ಅಪ್ಪಳಿಸಿದ್ದರಿಂದ ಅದರ ಕಬ್ಬಿಣದ ಸಲಾಕೆ ಮುರಿದು ಬಿದ್ದಿತ್ತು. ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೂ ಇಟ್ಟಿಗೆ ಬಿದ್ದು ಜಖಂ ಆಗಿತ್ತು.

ಮನೆಯ ಮುಂದೆ ಇರುವ ಪುಟ್ಟ ಬಚ್ಚಲು ಮನೆಯಲ್ಲಿ ಪಲ್ಲವಿ ಅವರು ಬಟ್ಟೆ ತೊಳೆಯುತ್ತಿದ್ದರು. ಇಟ್ಟಿಗೆ ಬಿದ್ದು ಮೇಲ್ಛಾವಣಿ ಕುಸಿದು ಪಲ್ಲವಿ ಅವರ ಮೇಲೆ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ. ಬಾಗಿಲು ಮತ್ತು ಕಿಟಕಿಗೆ ಬಡಿದ ಇಟ್ಟಿಗೆಗಳು ನೇರವಾಗಿ ಲಕ್ಷ್ಮಿದೇವಮ್ಮ ಹಾಗೂ ಚಿರುಗೆ ಬಡಿದಿದ್ದರೆ ಅವರಿಬ್ಬರೂ ಬದುಕುಳಿಯುವ ಸಾಧ್ಯತೆ ಇರಲಿಲ್ಲ.

`ಮೊಮ್ಮಗನನ್ನು ಆಡಿಸುತ್ತ ಟಿ.ವಿ ನೋಡುತ್ತಿದ್ದೆ. ಇನ್ನೇನು ವಾರ್ತೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಸ್ಫೋಟದ ಶಬ್ಧ ಕೇಳಿತು. ಏನಾಯ್ತು ಎನ್ನುವಷ್ಟರಲ್ಲಿ ಬಾಗಿಲು ಮತ್ತು ಕಿಟಕಿ ಒಡೆದು ಹೋಗಿತ್ತು. ಆತಂಕಗೊಂಡ ನಾನು ಮಗುವನ್ನು ಎತ್ತಿಕೊಂಡು ಹೊರಗೆ ಓಡಿದೆ~ ಎಂದು ಲಕ್ಷ್ಮಿದೇವಮ್ಮ ಹೇಳಿದರು.

ಲಕ್ಷ್ಮಿದೇವಮ್ಮ ಅವರ ಮಗ ವಸಂತಕುಮಾರ್ ಮತ್ತು ಪತಿ ಲಕ್ಷ್ಮಿನಾರಾಯಣ್ ಅವರು ಆಟೊ ಚಾಲಕರಾಗಿದ್ದಾರೆ. ಘಟನೆ ನಡೆದಾಗ ಅವರು ಮನೆಯಲ್ಲಿರಲಿಲ್ಲ. ಕಟ್ಟಡದಿಂದ ಚಿಮ್ಮಿದ ಇಟ್ಟಿಗೆಗಳು ಇಡೀ ಪ್ರದೇಶದಲ್ಲಿ ಸುಮಾರು ಇನ್ನೂರು ಅಡಿ ಅಂತರದಲ್ಲಿ ಬಿದ್ದಿದ್ದವು. `ಮಧ್ಯಾಹ್ನದ ವೇಳೆ ಆಗಿದ್ದರಿಂದ ಹೆಚ್ಚಿನ ಜನರು ಹೊರಗೆ ಇರಲಿಲ್ಲ. ಆದ್ದರಿಂದ ಜನರಿಗೆ ಇಟ್ಟಿಗೆಗಳು ಅಪ್ಪಳಿಸಿಲ್ಲ. ಹೆಚ್ಚಿನ ಜನರು ಹೊರಗೆ ಇದ್ದಿದ್ದರೆ ಇನ್ನೂ ಹಲವು ಮಂದಿ ಸಾವನ್ನಪ್ಪುತ್ತಿದ್ದರು~ ಎಂದು ಘಟನೆಯ ಪ್ರತ್ಯಕ್ಷದರ್ಶಿ ವೆಂಕಟೇಶ್ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.