ADVERTISEMENT

ಆಕ್ಸ್‌ಫರ್ಡ್ ಸ್ಟೋರ್ಸ್‌ ಆರಂಭ

​ಪ್ರಜಾವಾಣಿ ವಾರ್ತೆ
Published 23 ಮೇ 2012, 19:30 IST
Last Updated 23 ಮೇ 2012, 19:30 IST
ಆಕ್ಸ್‌ಫರ್ಡ್ ಸ್ಟೋರ್ಸ್‌ ಆರಂಭ
ಆಕ್ಸ್‌ಫರ್ಡ್ ಸ್ಟೋರ್ಸ್‌ ಆರಂಭ   

ಬೆಂಗಳೂರು: ಅಂತರರಾಷ್ಟ್ರೀಯ ಹಾಗೂ ಭಾರತೀಯ ಪುಸ್ತಕಗಳನ್ನು ನಗರದ ಓದುಗರಿಗೆ ಒದಗಿಸುವ ಬದ್ಧತೆಯೊಂದಿಗೆ ಅಪೀಜೆ ಆಕ್ಸ್‌ಫರ್ಡ್ ಬುಕ್ ಸ್ಟೋರ್ಸ್‌ ತನ್ನ ಮೂರನೇ ಮಳಿಗೆಯನ್ನು ಎಂ.ಜಿ. ರಸ್ತೆಯ `1-ಎಂಜಿ ಮಾಲ್~ನಲ್ಲಿ ಬುಧವಾರ ಆರಂಭಿಸಿತು.

2008ರಲ್ಲಿ ಲೀಲಾ ಪ್ಯಾಲೇಸ್‌ನ ಆರು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಪ್ರಥಮ ಪುಸ್ತಕ ಮಳಿಗೆಯನ್ನು ಪ್ರಾರಂಭಿಸಿದ ಸಂಸ್ಥೆಯು, ಒಂದು ವರ್ಷದ ಹಿಂದೆಯಷ್ಟೇ ಬ್ರೂಕ್‌ಫೀಲ್ಡ್‌ನ ಕಾಸ್ಮೋ ಮಾಲ್‌ನಲ್ಲಿ ಎರಡನೇ ಮಳಿಗೆಯನ್ನು ಆರಂಭಿಸಿತ್ತು. ಇದೀಗ ಆರಂಭಿಸಿರುವ ಮೂರನೇ ಪುಸ್ತಕ ಮಳಿಗೆಯಲ್ಲಿ ಕಾಫಿ ಬಾರ್ ಕೂಡ ಇದೆ.

ಮಳಿಗೆಯನ್ನು ಉದ್ಘಾಟಿಸಿದ ಸಾಹಿತಿ ಪ್ರೊ.ಯು.ಆರ್. ಅನಂತಮೂರ್ತಿ, `ಈ ಹಿಂದೆ ಪುಸ್ತಕ ಮಳಿಗೆಗಳಲ್ಲಿ ಸ್ನೇಹಿತರನ್ನು ಭೇಟಿ ಮಾಡಬಹುದಿತ್ತು. ಆದರೆ, ಇಂದು `ಕಾಫಿ ಡೇ~ಗಳಲ್ಲಿ ಸ್ನೇಹಿತರನ್ನು ಭೇಟಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. `ಆಕ್ಸ್ ಫರ್ಡ್~ನ ಈ ಮಳಿಗೆ ಹಿಂದಿನ ದಿನಗಳನ್ನು ನೆನಪಿಸುವಂತಿದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾದಂಬರಿಗಾರ್ತಿ ಶಶಿ ದೇಶಪಾಂಡೆ ಮಾತನಾಡಿ, `ಯಾವುದೇ ಸಾಹಿತ್ಯವಿರಲಿ. ಅದನ್ನು ಎಲ್ಲರೂ ಓದುವಂತಿರಬೇಕು ಹಾಗೂ ಅದು ಜನರಿಗೆ ತಲುಪುವಂತಿರಬೇಕು~ ಎಂದು ಇದೇ ವೇಳೆ ಪ್ರತಿಪಾದನೆ ಮಾಡಿದರು.

ನಾಟಕಕಾರ ಗಿರೀಶ್ ಕಾರ್ನಾಡ್  ಮಳಿಗೆಯ ಯಶಸ್ಸಿಗೆ ಶುಭ ಕೋರಿದರು. ಯುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿಕ್ರಮ್ ಸಂಪತ್, ಅಪೀಜೆ ಆಕ್ಸ್‌ಫರ್ಡ್ ಬುಕ್ ಸ್ಟೋರ್ಸ್‌ನ ಸಿಒಒ ಅಭಿಷೇಕ್ ಕುಮಾರ್, `ಕಾಮನ್‌ವೆಲ್ತ್ ರೈಟರ್ಸ್ ಪ್ರೆಸ್-2012~ಗೆ ನಾಮಾಂಕಿತರಾಗಿರುವ ಜಾಹ್ನವಿ ಬರೂವಾ, ಶೈನಿ ಆಂತೋನಿ, ಅಮ್ಮು ಜೋಸೆಫ್, ಗೀತಾ ಅರವಮುದನ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.