ADVERTISEMENT

ಆಟೊ ಚಾಲಕನಿಂದ 116 ಬಾರಿ ಸಂಚಾರ ನಿಯಮ ಉಲ್ಲಂಘನೆ!

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 19:51 IST
Last Updated 1 ಜೂನ್ 2017, 19:51 IST
ಆಟೊ ಚಾಲಕನಿಂದ 116 ಬಾರಿ ಸಂಚಾರ ನಿಯಮ ಉಲ್ಲಂಘನೆ!
ಆಟೊ ಚಾಲಕನಿಂದ 116 ಬಾರಿ ಸಂಚಾರ ನಿಯಮ ಉಲ್ಲಂಘನೆ!   

ಬೆಂಗಳೂರು: ಲಾಲ್‌ಬಾಗ್‌ ಬಳಿಯ ಸುಧಾಮನಗರದ ನಿವಾಸಿ ಸಲೀಂ ಪಾಷ ಎಂಬುವರು ಆಟೊ ಚಾಲನೆ ವೇಳೆ 116 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದು, ಇದುವರೆಗೂ ದಂಡ ಪಾವತಿ ಮಾಡಿಲ್ಲ.

ನಗರದಲ್ಲಿ ಸಂಚಾರದ ವೇಳೆ ಅತ್ಯಧಿಕ ಬಾರಿ ನಿಯಮ ಉಲ್ಲಂಘಿಸಿದ್ದ 500 ವಾಹನಗಳ ಚಾಲಕರ ಪಟ್ಟಿಯನ್ನು ಪೊಲೀಸರು, ‘@blrcitytraffic’ ಟ್ವಿಟರ್‌ ಖಾತೆಯಲ್ಲಿ ಗುರುವಾರ ಪ್ರಕಟಿಸಿದ್ದಾರೆ. ಅದರಲ್ಲಿ ಸಲೀಂ ಪಾಷ ಮೊದಲಿಗರು.

ಚಿಕ್ಕವೆಂಕಟಪ್ಪ ಲೇಔಟ್‌ ನಿವಾಸಿ ಜಿ. ಸರೋಜಮ್ಮ ಎಂಬುವರ ಹೆಸರಿಗೆ ನೋಂದಣಿಯಾಗಿರುವ ಮ್ಯಾಕ್ಸಿ ಕ್ಯಾಬ್‌ 105 ಬಾರಿ ನಿಯಮ ಉಲ್ಲಂಘಿಸಿದೆ. ಉದಯನಗರದ ಆಟೊ ಚಾಲಕ ನಾರಾಯಣಪ್ಪ 102 ಬಾರಿ ಹಾಗೂ ಹೊಂಬೇಗೌಡ ನಗರದ ಆಟೊ ಚಾಲಕ ಸುಭಾಷ್ 101 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ.

ADVERTISEMENT

ಜತೆಗೆ ಕನಿಷ್ಠ 34 ಬಾರಿ ನಿಯಮ ಉಲ್ಲಂಘಿಸಿರುವ ಚಾಲಕರ ಹೆಸರುಗಳನ್ನು ಈ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ಚಾಲಕರಿಗೆಲ್ಲ ಸಂಚಾರ ಪೊಲೀಸರು ಈಗಾಗಲೇ ನೋಟಿಸ್‌ ನೀಡಿದ್ದಾರೆ. 

ಯಾರೊಬ್ಬರೂ ದಂಡ ಪಾವತಿ ಮಾಡದಿದ್ದರಿಂದ ಅವರ ಹೆಸರನ್ನು ಬಹಿರಂಗವಾಗಿ ಪ್ರಕಟ ಮಾಡಿದ್ದು, ಸದ್ಯದಲ್ಲೇ ಮನೆಗೂ ಹೋಗಿ ದಂಡ ವಸೂಲಿ ಮಾಡಲಿದ್ದಾರೆ.

‘ದಂಡ ವಸೂಲಿ ಸಮರ್ಪಕವಾಗಿ ಆಗದಿದ್ದರಿಂದ ಕೆಲ ಚಾಲಕರು ಪದೇ ಪದೇ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.  ದಂಡ ವಸೂಲಿ ಜವಾಬ್ದಾರಿಯನ್ನು ಆಯಾ ವಿಭಾಗದ ಎಸಿಪಿಗಳಿಗೆ ವಹಿಸಲು ಹಿರಿಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ’ ಎಂದು ಸಂಚಾರ ಯೋಜನಾ ವಿಭಾಗದ ಎಸಿಪಿ ಆರ್.ಐ. ಖಾಸಿಂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.