ADVERTISEMENT

ಆಟೊ ಪರವಾನಗಿ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST

ಬೆಂಗಳೂರು: ರಾಜ್ಯ ಸರ್ಕಾರ 30 ಸಾವಿರ ಹೊಸ ಆಟೊರಿಕ್ಷಾಗಳಿಗೆ ಪರವಾನಗಿ ನೀಡಲು ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಟೊರಿಕ್ಷಾ ಚಾಲಕರ ಒಕ್ಕೂಟ (ಸಿಐಟಿಯು ಸಂಯೋಜಿತ) ಆಗ್ರಹಿಸಿದೆ.

ಸರ್ಕಾರದ ಈ ನಿರ್ಧಾರ ಮತ್ತು ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಏಪ್ರಿಲ್‌ 9ರಂದು 11 ಗಂಟೆಗೆ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಮಂಗಳವಾರ ಇಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಆಟೊರಿಕ್ಷಾ ತಯಾರಿಕಾ ಕಂಪನಿಗಳಿಗೆ ಲಾಭ ಮಾಡಿಕೊಟ್ಟು ಆ ಮೂಲಕ ಕಂಪನಿಗಳಿಂದ ಚುನಾವಣೆ ನಿಧಿ ಪಡೆಯಲು ಆಡಳಿತ ಪಕ್ಷ ನಡೆಸಿದ ತಂತ್ರ ಇದಾಗಿದೆ ಎಂದು ಅವರು ದೂರಿದರು.

ADVERTISEMENT

ನಗರದಲ್ಲಿ 1.5 ಲಕ್ಷ ಆಟೊಗಳಿವೆ. ಅವುಗಳನ್ನೇ ನಿಲ್ಲಿಸಲು ಸರಿಯಾದ ನಿಲ್ದಾಣಗಳ ವ್ಯವಸ್ಥೆ ಇಲ್ಲ. ಇದರ ಮಧ್ಯೆ ಇನ್ನಷ್ಟು ಆಟೊಗಳಿಗೆ ಪರವಾನಗಿ ನೀಡಿದರೆ ಸಂಚಾರ ದಟ್ಟಣೆ ಸಮಸ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಅವರು ಹೇಳಿದರು.

ಹೊಸ ಆಟೊಗಳಿಗೆ ಪರವಾನಗಿ ನೀಡುವ ಮೊದಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆಟೊರಿಕ್ಷಾ ಒಕ್ಕೂಟದ ಸಭೆ ಕರೆದು ಅವರ ಅಹವಾಲು ಆಲಿಸಬೇಕು. ಇದೂ ಅಲ್ಲದೇ ಆಟೊಗಳಿಗೆ ಬೇಡಿಕೆ ಇರುವ ಬಗ್ಗೆ ಸಾರ್ವಜನಿಕರಿಂದ ಮನವಿಗಳು ಸಲ್ಲಿಕೆಯಾಗಬೇಕು ಆಗ ಮಾತ್ರ ಹೊಸ ಪರವಾನಗಿ ನೀಡಲು ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ನಿಯಮ ಪಾಲಿಸದೆ ಏಕಾಏಕಿ ಪರವಾನಗಿ ನೀಡಲು ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ರುದ್ರಮೂರ್ತಿ ತಿಳಿಸಿದರು.

ಒಕ್ಕೂಟದ ಕಾರ್ಯಾಧ್ಯಕ್ಷ ರಾಜಶೇಖರ ಮೂರ್ತಿ, ಉಪಾಧ್ಯಕ್ಷ ನವೀನ್‌ ಶೆಣೈ, ಸಂತೋಷ್‌ ಕುಮಾರ್‌,  ಜಾವಿದ್‌ ಅಹಮದ್‌, ನಾಗರಾಜ್‌ ಎಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.