ADVERTISEMENT

ಆಟೊ ಪ್ರಯಾಣ ದರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 19:30 IST
Last Updated 9 ಮಾರ್ಚ್ 2012, 19:30 IST

ಬೆಂಗಳೂರು: ನಗರದಲ್ಲಿ ಸೋಮ ವಾರದಿಂದ ಜಾರಿಗೆ ಬರುವಂತೆ ಆಟೊ ಪ್ರಯಾಣ ದರ ಏರಿಕೆಯಾಗಲಿದ್ದು, ಗ್ರಾಹಕರು ಮೊದಲ 1.8 ಕಿ.ಮೀ.ಗೆ 17 ರೂಪಾಯಿ ಬದಲಿಗೆ (ಪ್ರಸ್ತುತ 2 ಕಿ.ಮೀ.ಗೆ) ಕನಿಷ್ಠ 20 ರೂಪಾಯಿ ದರ ಪಾವತಿಸಬೇಕಾಗಿದೆ.

ಗ್ರಾಹಕರು ಕನಿಷ್ಠ ಪ್ರಯಾಣ ದೂರ ಕ್ರಮಿಸಿದ ನಂತರ ಪ್ರತಿ ಕಿ.ಮೀ.ಗೆ 11 ರೂಪಾಯಿ ದರ ಪಾವತಿಸಬೇಕಾಗುತ್ತದೆ. ಪ್ರಸ್ತುತ ಈ ದರ 9 ರೂಪಾಯಿಗಳಷ್ಟಿದೆ.

ಕಳೆದ ನವೆಂಬರ್ ತಿಂಗಳಿಂದ ಆಟೊರಿಕ್ಷಾ ಚಾಲಕರ ಒಕ್ಕೂಟವು ದರ ಪರಿಷ್ಕರಣೆಗೆ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿತ್ತು. ಆದರೆ, ಇತ್ತೀಚೆಗೆ ಎಲ್‌ಪಿಜಿ ದರ ಮೂರು ರೂಪಾಯಿ ಹೆಚ್ಚಳವಾದ ನಂತರ ಈ ಬೇಡಿಕೆಗೆ ಇತರೆ ಒಕ್ಕೂಟಗಳು ಕೂಡ ಬೆಂಬಲ ಸೂಚಿಸಿದ್ದವು. ಆಟೊ ಪ್ರಯಾಣ ದರ ಹೆಚ್ಚಿಸಬೇಕೆಂಬ ಆಟೊರಿಕ್ಷಾ ಚಾಲಕರ ಒತ್ತಾಯಕ್ಕೆ ಸರ್ಕಾರ ಕೂಡ ಮಣಿದು ದರ ಪರಿಷ್ಕರಣೆಗೆ ಶುಕ್ರವಾರ ಒಪ್ಪಿಗೆ ಸೂಚಿಸಿದೆ.

ಸಭೆಯ ನಂತರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಆಟೊರಿಕ್ಷಾ ಚಾಲಕರ ಒಕ್ಕೂಟದ ಅಧ್ಯಕ್ಷ ಮೀನಾಕ್ಷಿ ಸುಂದರಂ, `ಕನಿಷ್ಠ ಪ್ರಯಾಣ ದರವನ್ನು 24 ರೂಪಾಯಿಗೆ (ಮೊದಲ 2 ಕಿ.ಮೀ.ಗೆ) ಏರಿಸುವಂತೆ ನಾವು ಸರ್ಕಾರದ ಮುಂದೆ ಬೇಡಿಕೆ ಮುಂದಿಟ್ಟಿದ್ದೆವು. ಆನಂತರದ ಪ್ರತಿ ಕಿ.ಮೀ.ಗೆ 12 ರೂಪಾಯಿ ದರ ನಿಗದಿಪಡಿಸುವಂತೆ ಒತ್ತಾಯಿಸಿದ್ದೆವು. ಕೊನೆಗೆ ಕನಿಷ್ಠ ಪ್ರಯಾಣ ದರವನ್ನು 20 ರೂಪಾಯಿಗಳಿಗೆ ಹೆಚ್ಚಿಸಲು ಒಪ್ಪಿದ್ದೇವೆ~ ಎಂದು ತಿಳಿಸಿದರು.

ಅಲ್ಲದೆ, ಕಾಯುವಿಕೆಗೆ ಪ್ರತಿ ನಿಮಿಷಕ್ಕೆ 33 ಪೈಸೆ ದರ ನಿಗದಿಪಡಿಸುವಂತೆ ನಾವು ಸರ್ಕಾರವನ್ನು ಕೋರಿದ್ದೇವೆ.

ಆದರೆ, ಈ ಬೇಡಿಕೆಯನ್ನು ಒಪ್ಪಲಿದೆಯೇ ಎಂಬ ಬಗ್ಗೆ ಸರ್ಕಾರದಿಂದ ಯಾವುದೇ ಖಚಿತ ಭರವಸೆ ಸಿಕ್ಕಿಲ್ಲ ಎಂದು ಅವರು ಹೇಳಿದರು.

ಈ ನಡುವೆ, ಎಲೆಕ್ಟ್ರಾನಿಕ್ ಮೀಟರ್ ಅಳವಡಿಕೆಗೆ ಕೈಗೆಟಕುವ ದರ ನಿಗದಿಪಡಿಸಲು ಮಧ್ಯೆಪ್ರವೇಶಿಸುವಂತೆ ನಾವು ಸರ್ಕಾರವನ್ನು ಕೋರಿದ್ದೇವೆ. ಈ ಸಂಬಂಧ ಸರ್ಕಾರ ಮುಂದಿನ ವಾರ ಆಟೊ ಚಾಲಕರ ಒಕ್ಕೂಟಗಳು ಹಾಗೂ ಎಲೆಕ್ಟ್ರಾನಿಕ್ ಮೀಟರ್ ಅಳವಡಿಕೆದಾರರೊಂದಿಗೆ ಮಾತುಕತೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಸಂಭವವಿದೆ ಎಂದು ಅವರು ಹೇಳಿದರು.

ಪ್ರಸ್ತುತ ಯಾಂತ್ರಿಕ ಮೀಟರ್ ಅಳವಡಿಕೆಗೆ 350ರಿಂದ 550 ರೂಪಾಯಿ ದರ ಖರ್ಚಾಗುತ್ತಿದ್ದರೆ, ಅದೇ ಎಲೆಕ್ಟ್ರಾನಿಕ್ ಮೀಟರ್ ಅಳವಡಿಸಲು 800ರಿಂದ 1000 ರೂಪಾಯಿ ಪಾವತಿಸಬೇಕಾಗಿದೆ. ಇದಕ್ಕಾಗಿ ಸರ್ಕಾರ ಆಟೊರಿಕ್ಷಾ ಚಾಲಕರಿಗೆ ಅನುಕೂಲವಾಗುವಂತಹ ದರ ನಿಗದಿಪಡಿಸಬಹುದು ಎಂಬ ವಿಶ್ವಾಸವನ್ನು ಮತ್ತೊಂದು ಒಕ್ಕೂಟದ ಪದಾಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಒಂದು ವೇಳೆ ಎಲ್‌ಪಿಜಿ ದರ ಕಡಿಮೆಯಾದಲ್ಲಿ ಆಟೊ ಪ್ರಯಾಣ ದರವನ್ನು ಕಡಿಮೆ ಮಾಡಲು ಒಕ್ಕೂಟಗಳು ಸಮ್ಮತಿ ಸೂಚಿಸಿವೆ. ಮತ್ತೆ ಎಲ್‌ಪಿಜಿ ದರ ಏರಿಕೆಯಾದರೆ ಅದರಿಂದ ಗ್ರಾಹಕರಿಗೆ ಅನುಕೂಲವಾಗಬಹುದು. ಇಲ್ಲದಿದ್ದರೆ ಆಟೋ ಚಾಲಕರಿಗೆ ನಷ್ಟವಾಗಲಿದೆ ಎಂಬುದು ಒಕ್ಕೂಟದ ವಾದ.
 


 

 
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.