ADVERTISEMENT

ಆತ್ಮಸಾಕ್ಷಿಗೆ ವಿರುದ್ಧ ಕೆಲಸ ಮಾಡಿಲ್ಲ: ಶ್ರೀಧರ್

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ಬೆಂಗಳೂರು: `ಅಪ್ಪಟ ಗಾಂಧೀವಾದಿ ಕೂಡ ಸರ್ಕಾರಿ ಕಚೇರಿಗೆ ಭೇಟಿ ನೀಡಿದರೆ ಅಲ್ಲಿನ ಭ್ರಷ್ಟಾಚಾರ ಕಂಡು ನಕ್ಸಲ್ ಮನೋಧರ್ಮವನ್ನೇ ಮೆಚ್ಚುತ್ತಾನೆ. ಅಂತಹುದ್ದರಲ್ಲಿ ವ್ಯವಸ್ಥೆಯ ಲೋಪದೋಷದಿಂದ ಸಾಮಾನ್ಯ ವ್ಯಕ್ತಿಯೊಬ್ಬ ಭೂಗತ ಜಗತ್ತನ್ನು ಪ್ರವೇಶಿಸುವುದರಲ್ಲಿ ಅಚ್ಚರಿಯಿಲ್ಲ' ಎಂದು ಕನ್ನಡ ಪುಸ್ತಕ ಪ್ರಾಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

ಅಂಕಿತ ಪುಸ್ತಕವು ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಅಗ್ನಿ' ಶ್ರೀಧರ್ ಅವರ `ಕಾಡುವ ಸಾಧಕರ ಸಂಗತಿಗಳು', `ಟಿಬೆಟ್ಟಿಯನ್ನರ ಸತ್ತವರ ಪುಸ್ತಕ', `ದಾದಾಗಿರಿಯ ದಿನಗಳು 2', `ದಾದಾಗಿರಿಯ ದಿನಗಳು 3' ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಸಿಟ್ಟು  ಮತ್ತು ಬಂಡಾಯ ಪ್ರವೃತ್ತಿಯಿಂದ ಶ್ರೀಧರ್ ಅವರಿಗೆ ಪಾತಕಲೋಕದ ಪರಿಚಯವಾಗಿದ್ದರೂ ಮಾನವೀಯತೆಯನ್ನು ಮರೆಯದೇ ಇರುವುದು ಶ್ಲಾಘನೀಯ. ಇದರೊಂದಿಗೆ ಅಕ್ಷರ ಪ್ರೀತಿಯನ್ನು ಹಾಗೇ ಉಳಿಸಿಕೊಳ್ಳುವ ಮೂಲಕ ಇತರರಿಗೂ ಅನುಸರಣೀಯರಾಗಿದ್ದಾರೆ' ಎಂದು ತಿಳಿಸಿದರು.

ADVERTISEMENT

ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ, `ಶೋಷಿತರ ಜೀವನದ ಬಗ್ಗೆ ಹೆಚ್ಚಿನ ಕತೆ, ಕಾದಂಬರಿ ಹಾಗೂ ಚಿತ್ರಕತೆಗಳನ್ನು ಹೆಣೆಯುವ ಅಗತ್ಯವಿದೆ. ಪಂಚಾಯತಿ ಮಟ್ಟದಲ್ಲೂ ಬಂಡವಾಳಶಾಹಿ ಧೋರಣೆ ಎದ್ದುಕಾಣುತ್ತಿದ್ದು, ಸಾಮಾಜಿಕ ಕಳಕಳಿಯುಳ್ಳ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಅಗತ್ಯವಿದೆ'  ಎಂದು ಅಭಿಪ್ರಾಯಪಟ್ಟರು.

ಕೃತಿಕಾರ ಅಗ್ನಿ ಶ್ರೀಧರ್, `ಯಾವುದೋ ಆಕರ್ಷಣೆಗೆ ಒಳಗಾಗಿ ಭೂಗತ ಜಗತ್ತನ್ನು ಪ್ರವೇಶಿಸಲಿಲ್ಲ. ಇಂದಿಗೂ ನನ್ನ ನಡವಳಿಕೆಯಲ್ಲಿ ಬೇಕಂತಲೇ ತಪ್ಪು ಗುರುತಿಸುವ ದೊಡ್ಡ ಪಡೆಯಿದೆ. ಆದರೆ ಎಂದಿಗೂ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾವ ಕಾರ್ಯವನ್ನು ಕೈಗೊಂಡಿಲ್ಲ' ಎಂದು ಸ್ಪಷ್ಟಪಡಿಸಿದರು.ವಿಮರ್ಶಕ ಕೆ.ವೈ. ನಾರಾಯಣಸ್ವಾಮಿ, ಕವಯತ್ರಿ ಎಚ್. ಎಲ್.ಪುಷ್ಪಾ ಇತರರು ಉಪಸ್ಥಿತರಿದ್ದರು,
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.