ADVERTISEMENT

ಆತ್ಮಹತ್ಯೆ: ವಿದ್ಯಾರ್ಥಿಗಳಿಂದ ಕಾಲೇಜಿನ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮೇ 2011, 19:30 IST
Last Updated 3 ಮೇ 2011, 19:30 IST

ಮಹದೇವಪುರ: ಪರೀಕ್ಷೆ ಬರೆಯಲು ವಿದ್ಯಾರ್ಥಿಯೊಬ್ಬನಿಗೆ ಕಾಲೇಜಿನ ಆಡಳಿತ ಮಂಡಳಿ ಪ್ರವೇಶಪತ್ರ ನಿರಾಕರಿಸಿದ್ದರಿಂದ ಬೇಸತ್ತ ಆತ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವರ್ತೂರು ಸಮೀಪದ ಗುಂಜೂರು ಗ್ರಾಮದ ಹೊರವಲಯದಲ್ಲಿರುವ ಕೃಪಾನಿಧಿ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದರು.

ಪ್ರವೇಶಪತ್ರ ಸಿಗದ ಬಿ.ಎಚ್.ಮನೋಜ್ ಎಂಬ ವಿದ್ಯಾರ್ಥಿ ಏಪ್ರಿಲ್ 30ರಂದು ಎಚ್.ಎಸ್.ಆರ್. ಬಡಾವಣೆಯಲ್ಲಿನ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಸೋಮವಾರ ಕಾಲೇಜಿನೊಳಗೆ ನುಗ್ಗಿ ನಾಮಫಲಕ ಹಾಗೂ ತಡೆಗೋಡೆಗೆ ಹಾನಿ ಉಂಟು ಮಾಡಿದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕೃಪಾನಿಧಿ ಕಾಲೇಜಿನ ಅಧ್ಯಕ್ಷರನ್ನು ಬಂಧಿಸಿದರು.

‘ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಮನೋಜ್ ಶೇ 80ರಷ್ಟು ಹಾಜರಾತಿ ಹೊಂದಿದ್ದರೂ ಪರೀಕ್ಷೆ ಬರೆಯಲು ಪ್ರವೇಶಪತ್ರ ನೀಡಲಿಲ್ಲ. ಇದೇ ಕಾರಣದಿಂದ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಕನ್ನಡ ಉಪನ್ಯಾಸಕಿಯೇ ಕಾರಣ. ಅವರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದರು.

‘ಕಾಲೇಜಿನ ಕನ್ನಡ ವಿಷಯ ಉಪನ್ಯಾಸಕಿ ಹಾಗೂ ಪ್ರಾಂಶುಪಾಲರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು’ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ಎಚ್.ಎಸ್.ಆರ್. ಬಡಾವಣೆ ಹಾಗೂ ವರ್ತೂರು ಪೊಲೀಸ್ ಠಾಣೆ ಸಿಬ್ಬಂದಿ ಪ್ರತಿಭಟನಾಕಾರರ ಮನವೊಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.