ಬೆಂಗಳೂರು: `ಅರಣ್ಯದಲ್ಲಿ ದೊರೆಯುವ ಉಪ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಮೂಲಭೂತ ಹಕ್ಕನ್ನು ಆದಿವಾಸಿಗಳು ಪಡೆದಿದ್ದಾರೆ. ಈ ವಿಚಾರದಲ್ಲಿ ಅರಣ್ಯಾಧಿಕಾರಿಗಳು ಯಾವುದೇ ರೀತಿಯ ನಿರ್ಬಂಧ ಹೇರದಂತೆ ಸೂಚಿಸುತ್ತೇನೆ~ ಎಂದು ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಭರವಸೆ ನೀಡಿದರು.
ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತು ನಗರದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಆದಿವಾಸಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
`ರಾಜ್ಯದಾದ್ಯಂತ ವಿವಿಧ ಹೆಸರಿನಲ್ಲಿ ಹರಿದು ಹಂಚಿ ಹೋಗಿರುವ ಆದಿವಾಸಿ ಜನಾಂಗದ ಅಭಿವೃದ್ಧಿಗೆ ವಿವಿಧ ಹೆಸರುಗಳೇ ತೊಡಕಾಗಿದೆ. ಸರ್ಕಾರ ಸಾಮಾಜಿಕ ಭದ್ರತೆ ನೀಡುವಲ್ಲಿ ಬದ್ಧವಾಗಿದೆ. ಪರಿಷತ್ತು ಈಗಾಗಲೇ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿದೆ. ಇದನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು~ ಎಂದು ತಿಳಿಸಿದರು.
`ಹುಲಿ ಯೋಜನೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಅರಣ್ಯದಲ್ಲಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ. ಆದಿವಾಸಿಯಲ್ಲಿರುವ ಕೆಲವೇ ಬಲಶಾಲಿ ಪಂಗಡಗಳು ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿದೆ~ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಪರಿಷತ್ ಅಧ್ಯಕ್ಷ ಬಸವರಾಜು, `ಏಕಗವಾಕ್ಷಿ ಮಾದರಿಯಲ್ಲಿ ರಾಜ್ಯದಲ್ಲಿರುವ ಆದಿವಾಸಿಗಳಿಗೆ ಸವಲತ್ತುಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಪ್ರತ್ಯೇಕವಾದ ಪರಿಶಿಷ್ಟ ಪಂಗಡಗಳ ಆಯೋಗ ಮತ್ತು ಸಚಿವಾಲಯವನ್ನು ರಚನೆ ಮಾಡಬೇಕು~ ಎಂದು ಒತ್ತಾಯಿಸಿದರು.
`ಅರಣ್ಯ ಹಕ್ಕು ಕಾಯಿದೆಯಡಿ ಬಹುಸಂಖ್ಯಾತ ಬುಡಕಟ್ಟುಗಳು ವಾಸವಾಗಿರುವ ಪಶ್ಚಿಮಘಟ್ಟ ಪ್ರದೇಶವನ್ನು ಅನಸೂಚಿತ ಪ್ರದೇಶವೆಂದು ಘೋಷಿಸಬೇಕು. ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಿ ಆದಿವಾಸಿಗಳ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಬೇಕು~ ಎಂದು ಆಗ್ರಹಿಸಿದರು.
ಇತರೆ ಬೇಡಿಕೆಗಳು: ಇತರೆ ಅಲೆಮಾರಿ ಬುಡಕಟ್ಟುಗಳಾದ ಅಡ್ವಿ, ಚಿಂಚೇರ್, ಕಾತಕರಿ ಮತ್ತುಅಭಿವೃದ್ಧಿಗಾಗಿ ವಿಶೇಷ ಯೋಜನೆ ಅನುಷ್ಠಾನಗೊಳಿಸದ ಆದಿವಾಸಿ ದಿನಾಚರಣೆಯನ್ನು ಅಧಿಕೃತವಾಗಿ ಆಚರಿಸಿ, ಸಾಧಕರನ್ನು ` ಆದಿವಾಸಿ ಸಿರಿ~ ಎಂಬ ಪ್ರಶಸ್ತಿ ನೀಡಿ ಗೌರವಿಸಬೇಕು. ಆದಿವಾಸಿ ಭವನ ನಿರ್ಮಾಣಕ್ಕೆ ಮುಂದಾಗಬೇಕು. ಉನ್ನತ ಶಿಕ್ಷಣಕ್ಕೆ ಆದ್ಯತೆ, ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವುದು ಸೇರಿದಂತೆ ಹಲವು ಬೇಡಿಕೆಗಳ ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.