ADVERTISEMENT

ಆಧುನೀಕರಣಕ್ಕೆ ₨18 ಕೋಟಿ: ಖರ್ಗೆ

ಯಲಹಂಕ ರೈಲು ನಿಲ್ದಾಣ ನಾಲ್ಕೈದು ಹೊಸ ಪ್ಲಾಟ್‌ಫಾರ್ಮ್

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:47 IST
Last Updated 23 ಡಿಸೆಂಬರ್ 2013, 19:47 IST

ಯಲಹಂಕ: ‘ಯಲಹಂಕ ರೈಲು ನಿಲ್ದಾಣದ ಆಧುನೀಕರಣಗೊಳಿಸುವ ಕಾರ್ಯವನ್ನು ₨18 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಇಲ್ಲಿನ ರೈಲುಗಾಲಿ ಕಾರ್ಖಾನೆಗೆ ಸೋಮವಾರ ಭೇಟಿ ನೀಡಿ, ಕಾರ್ಖಾನೆಯ ವಿವಿಧ ಘಟಕಗಳಿಗೆ ತೆರಳಿ ಕಾರ್ಯವೈಖರಿ ವೀಕ್ಷಿಸಿದ  ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮಗಾರಿಯನ್ನು ಶೀಘ್ರದಲ್ಲೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ರೈಲು ನಿಲ್ದಾಣದಲ್ಲಿ ನಾಲ್ಕೈದು ನೂತನ ಫ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸ­ಲಾಗುವುದು. ಇದರಿಂದ ನಗರ ರೈಲು ನಿಲ್ದಾಣ, ಯಶವಂತಪುರ ಹಾಗೂ ಬಾಣಸವಾಡಿ ರೈಲು ನಿಲ್ದಾಣಗಳ ಮೇಲಿರುವ ಒತ್ತಡವನ್ನು  ಇಲ್ಲಿನ ರೈಲು ನಿಲ್ದಾಣದ ಮೂಲಕ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಉದ್ದಂಪುರದಿಂದ ಕತ್ರಾ (ವೈಷ್ಣೋ­ದೇವಿ) ರೈಲು ಹಳಿ ನಿರ್ಮಾಣಕಾರ್ಯ ಪೂರ್ಣ ಗೊಂಡಿದ್ದು, ಈಗಾಗಲೆ ರೈಲು ಸುರಕ್ಷತಾ ಆಯುಕ್ತರಿಂದ ಕ್ಲಿಯರೆನ್‌್ಸ ಪಡೆಯಲಾಗಿದೆ. ನೂತನ ರೈಲು ಸಂ­ಚಾರ ಶೀಘ್ರದಲ್ಲೆ ಆರಂಭ­ವಾಗ­ಲಿದ್ದು, ಇದರಿಂದ  ಮೈಸೂರು, ಕನ್ಯಾ­ಕುಮಾ­ರಿಯಿಂದ ಕಾಶ್ಮೀರದವರೆಗೆ ಸಂಚ­ರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಗುಲ್ಬರ್ಗ ಜಿಲ್ಲೆಯು ಮೂರು ರೈಲ್ವೆ ವಲಯಗಳಾಗಿ ಹಂಚಿಹೋಗಿದ್ದು, ಜಿಲ್ಲೆಯ ಜನತೆಗೆ ಅನುಕೂಲ ಮಾಡಿ­ಕೊಡುವ ಉದ್ದೇಶದಿಂದ ಆ ಮೂರು ವಲಯಗಳನ್ನು ಒಟ್ಟಾಗಿ ಸೇರಿಸಿ ಸೋಲಾಪುರ ವಲಯವನ್ನಾಗಿ ಮಾರ್ಪ­ಡಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 150 ಎಕರೆ ಜಾಗವನ್ನು ನೀಡಲು ರಾಜ್ಯ ಸರ್ಕಾರ ಅನುಮತಿ ನೀಡಲಾಗಿದೆ.

ಈ ವಲಯ ನಿರ್ಮಾಣಕ್ಕೆ ಐದು ವರ್ಷಗಳ ಅವಧಿ ಬೇಕಾಗಿದ್ದು, ಅಂದಾಜು ಒಟ್ಟು ₨700ರಿಂದ 750 ಕೋಟಿ ಹಣ ವೆಚ್ಚವಾಗಲಿದ್ದು, ಇದಕ್ಕಾಗಿ ರೈಲ್ವೆ ಇಲಾಖೆಯು ಹಂತ–ಹಂತವಾಗಿ ಹಣ ಬಿಡುಗಡೆ ಮಾಡಲಿದೆ. ಪ್ರಥಮ ಹಂತದಲ್ಲಿ ₨75 ಕೋಟಿ ಅನು­ದಾ­ನವನ್ನು ಮೀಸಲಿಡಲಾಗಿದೆ ಎಂದು ವಿವರಿಸಿದರು.

ರಾಜಾನುಕುಂಟೆ ಬಳಿ ಪ್ರತಿ 20 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸುವು ದರಿಂದ ರೈಲ್ವೆಗೇಟ್‌ ಹಾಕುವ ಪರಿಣಾಮ, ಸಾರ್ವಜನಿಕರು
ತೀವ್ರ ತೊಂದರೆ ಅನುಭವಿಸು ವಂತಾಗಿದೆ ಎಂಬ ಪ್ರಶ್ನೆಗೆ, ರೈಲ್ವೆ ಇಲಾಖೆಯ ನಿಯಮದಂತೆ ಒಂದು ದಿನಕ್ಕೆ ಒಂದು ಲಕ್ಷ ವಾಹನಗಳು ಆ ಮಾರ್ಗದಲ್ಲಿ ಸಂಚರಿಸುತ್ತಿದ್ದರೆ ಸೇತುವೆ ನಿರ್ಮಾಣ ಮಾಡಲು ಅವಕಾಶವಿರುತ್ತದೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನುದಾನ ಭರಿಸಿ ಕಾಮಗಾರಿ ಕೈಗೊಂಡರೆ ನಮ್ಮದೇನು ಅಭ್ಯಂತರವಿಲ್ಲ ಎಂದು ತಿಳಿಸಿದರು. ಕಾರ್ಖಾನೆಯು ಆರಂಭದ ವರ್ಷ­ದಲ್ಲಿ 50 ಸಾವಿರ ಗಾಲಿ ಮತ್ತು ಅಚ್ಚು­ಗಳನ್ನು ಉತ್ಪಾದನೆ  ಮಾಡುತ್ತಿದ್ದು, ಇಂದು ಎರಡು ಲಕ್ಷಕ್ಕೂ ಹೆಚ್ಚು ಗಾಲಿ ಮತ್ತು ಅಚ್ಚುಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT