ADVERTISEMENT

ಆರು ತಿಂಗಳಲ್ಲಿ 47 ಕಂದಮ್ಮಗಳ ಮೇಲೆ ಅತ್ಯಾಚಾರ

ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಬರುವ ದೂರುಗಳ ಸಂಖ್ಯೆ ಹೆಚ್ಚಳ

ಆರ್‌.ಜೆ.ಯೋಗಿತಾ
Published 12 ಜುಲೈ 2017, 6:55 IST
Last Updated 12 ಜುಲೈ 2017, 6:55 IST
ಆರು ತಿಂಗಳಲ್ಲಿ 47 ಕಂದಮ್ಮಗಳ ಮೇಲೆ ಅತ್ಯಾಚಾರ
ಆರು ತಿಂಗಳಲ್ಲಿ 47 ಕಂದಮ್ಮಗಳ ಮೇಲೆ ಅತ್ಯಾಚಾರ   

ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ  ಆರು ತಿಂಗಳಲ್ಲಿ ಈ ಕುರಿತು 47  ದೂರುಗಳು ಬಂದಿವೆ.

ಈ ದೂರುಗಳ ಪ್ರಕಾರ,  ಹನ್ನೆರಡು ವರ್ಷಕ್ಕಿಂತ ಒಳಗಿನ ಮಕ್ಕಳೇ ಹೆಚ್ಚಾಗಿ  ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ.  ಸಂಬಂಧಿಕರು, ಶಾಲೆಗಳಲ್ಲಿ, ಟ್ಯೂಷನ್‌ ತರಗತಿಗಳಲ್ಲಿ ಶಿಕ್ಷಕರೂ ಮಕ್ಕಳ ಮೇಲೆ  ಅತ್ಯಾಚಾರ  ನಡೆಸಿದ್ದಾರೆ.

ಕೊಡಗಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ  ನಡೆದ ಬಗ್ಗೆ ಹಾಗೂ 11 ವರ್ಷದ ಬಾಲಕಿ ಮೇಲೆ ಪೊಲೀಸರಿಂದಲೇ ಅತ್ಯಾಚಾರ ನಡೆದಿರುವ ಬಗ್ಗೆಯೂ  ದೂರು ಬಂದಿದೆ.

ADVERTISEMENT

500ಕ್ಕೂ ಹೆಚ್ಚು ದೂರು: ಬಾಲ್ಯವಿವಾಹ, ದೇವದಾಸಿ ಪದ್ಧತಿ, ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ವಂಚನೆ, ಪುಸ್ತಕ, ಸಮವಸ್ತ್ರ ನೀಡದಿರುವುದು, ವೈದ್ಯಕೀಯ ನಿರ್ಲಕ್ಷ್ಯ,  ಮಕ್ಕಳ ಮೇಲೆ ದೌರ್ಜನ್ಯ, ಕಾಣೆಯಾಗಿರುವುದು ಸೇರಿದಂತೆ 2017ರ ಜನವರಿಯಿಂದ ಇಲ್ಲಿಯವರೆಗೆ ಆಯೋಗಕ್ಕೆ 507 ದೂರುಗಳು ಬಂದಿವೆ.

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ  (ಪೋಕ್ಸೊ) ಅಡಿ ಆಯೋಗದಲ್ಲಿ ದಾಖಲಾಗಿರುವ ಎಲ್ಲಾ   ದೂರುಗಳ ಪರಿಶೀಲನೆ ನಡೆಸಿದ್ದೇವೆ.  ತಪ್ಪಿತಸ್ಥರ ವಿರುದ್ಧ ಸಂಬಂಧಪಟ್ಟ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಇನ್ನೂ ಕೆಲವು ಪ್ರಕರಣಗಳು ಇತ್ಯರ್ಥವಾಗಿದೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಮರಿಸ್ವಾಮಿ ತಿಳಿಸಿದರು.

‘ನಮಗೆ ನೇರವಾಗಿ  47 ದೂರುಗಳು ಬಂದಿವೆ. ಪೊಲೀಸ್‌ ಠಾಣೆಗಳಲ್ಲಿ ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ದಾಖಲಾಗುತ್ತವೆ.  ಮಕ್ಕಳ ಮೇಲಿನ ದೌರ್ಜನ್ಯ ನಡೆಯದಂತೆ ತಡೆಯುವ ಬಗ್ಗೆ ಜಾಗೃತಿ ಮೂಡಿಸಲು  ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.

‘ಮಾಧ್ಯಮಗಳಲ್ಲಿ ವರದಿಯಾಗುವ ಹಾಗೂ ಸಂಘ ಸಂಸ್ಥೆಗಳಿಂದ ಬರುವ ದೂರುಗಳನ್ನೂ ನಾವು  ಪರಿಗಣಿಸುತ್ತೇವೆ. ಇಂತಹ ಅನೇಕ ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಬಳಿಕ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ, ಸಂತ್ರಸ್ತರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಎಫ್‌ಐಆರ್‌ ದಾಖಲಿಸಿದ ತಕ್ಷಣ ಸಂತ್ರಸ್ತ ಮಗುವಿಗೆ ₹5 ಸಾವಿರ ಪರಿಹಾರ ನೀಡುತ್ತೇವೆ’ ಎಂದು ತಿಳಿಸಿದರು.

ಮಕ್ಕಳ ಕಳ್ಳಸಾಗಣೆ,  ಬಾಲ್ಯ ವಿವಾಹ ಪ್ರಕರಣಗಳು: ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಾಗುತ್ತಿವೆ.  ಜನವರಿಯಿಂದ ಇಲ್ಲಿಯವರೆಗೆ 12 ಪ್ರಕರಣಗಳು ಆಯೋಗದಲ್ಲಿ ದಾಖಲಾಗಿವೆ. ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಇವುಗಳ ತನಿಖೆ ನಡೆಸುತ್ತಿದ್ದಾರೆ.

ಬಾಲ್ಯ ವಿವಾಹಗಳು ಈಗಲೂ ವರದಿಯಾಗುತ್ತಿವೆ. ಸಾಮೂಹಿಕ ವಿವಾಹದಲ್ಲಿ 14 ವರ್ಷದ ಬಾಲಕಿಗೆ ಮದುವೆ ಮಾಡಿಸಿದ ಬಗ್ಗೆ ಹಾಗೂ  ಇನ್ನೊಂದು ಪ್ರಕರಣದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಮದುವೆಯಾದ ಬಗ್ಗೆ ಯೂ ಆಯೋಗಕ್ಕೆ ದೂರು ಬಂದಿವೆ.  ಆರ್‌ಟಿಇ ಅಡಿ ಶಾಲೆಗೆ ಪ್ರವೇಶ ಪಡೆದ ಮಗು ಶಾಲೆಯ ಶೌಚಾಲಯ ಬಳಸಿದಕ್ಕೆ ಶಿಕ್ಷೆ ವಿಧಿಸಿದ್ದು,  ಮಕ್ಕಳನ್ನು ನಗ್ನಗೊಳಿಸಿ ಪರೇಡ್‌ ಮಾಡಿಸಿರುವುದು, ರಿಮ್ಯಾಂಡ್‌ ಹೋಮ್‌ಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವ   ಬಗ್ಗೆಯೂ ಆಯೋಗಕ್ಕೆ ದೂರುಗಳು ಬಂದಿವೆ.

ಕಾಯ್ದೆಗಳ ಕುರಿತು ಶಿಬಿರ:‘ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಬಾಲ ನ್ಯಾಯ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ, ಪೋಕ್ಸೊ ಕಾಯ್ದೆಯ ಮಹತ್ವದ ಕುರಿತು ಆಯೋಗ ಪರಿಚಯಾತ್ಮಕ ಶಿಬಿರಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳುತ್ತದೆ’ ಎಂದು ಮರಿಸ್ವಾಮಿ ಮಾಹಿತಿ ನೀಡಿದರು.

**

ನಿರ್ದಿಷ್ಟ ಕಾರ್ಯವಿಧಾನ
ಪೋಕ್ಸೊ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕು ಎಂಬ ಕುರಿತು ಶಿಷ್ಟ ಕಾರ್ಯ ವಿಧಾನ ಅಳವಡಿಸಿಕೊಳ್ಳಲು ಆಯೋಗ ಮುಂದಾಗಿದೆ.  ‘ಈ ಸಂಬಂಧ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಪೊಲೀಸ್‌  ಅಧಿಕಾರಿಗಳು, ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು, ನ್ಯಾಯಾಧೀಶರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಮಾಧ್ಯಮದವರು ಇದರಲ್ಲಿ ಸದಸ್ಯರಾಗಿದ್ದಾರೆ. ಈ ಸಮಿತಿ ಪೋಕ್ಸೊ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕು ಎಂಬುದಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದೆ. ಶೀಘ್ರವೇ ಇದನ್ನು ಅಳವಡಿಸಿಕೊಳ್ಳುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.