ADVERTISEMENT

‘ಆರೋಗ್ಯ ಕರ್ನಾಟಕ’ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಟಿ. ನರಸೀಪುರ ತಾಲ್ಲೂಕಿನ ಐವರಿಗೆ ಸಾಂಕೇತಿಕವಾಗಿ ಸಾರ್ವತ್ರಿಕ ಆರೋಗ್ಯ ಕಾರ್ಡ್‌ ವಿತರಿಸಲಾಯಿತು. ಪ್ರಜಾವಾಣಿ ಚಿತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಟಿ. ನರಸೀಪುರ ತಾಲ್ಲೂಕಿನ ಐವರಿಗೆ ಸಾಂಕೇತಿಕವಾಗಿ ಸಾರ್ವತ್ರಿಕ ಆರೋಗ್ಯ ಕಾರ್ಡ್‌ ವಿತರಿಸಲಾಯಿತು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ಸೇವೆ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ‘ಆರೋಗ್ಯ ಕರ್ನಾಟಕ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು.

ರಾಜ್ಯದ 1.43 ಕೋಟಿ ಕುಟುಂಬಗಳಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ.

ಯೋಜನೆಯಡಿ ಅರ್ಹತಾ ವರ್ಗದ ರೋಗಿಗಳಿಗೆ (ಬಿಪಿಎಲ್‌) ಸರ್ಕಾರಿ ಮತ್ತು ರೆಫರಲ್‌ ಮೂಲಕ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ ಸಿಗಲಿದೆ. ಸಾಮಾನ್ಯ ವರ್ಗದ ರೋಗಿಗಳಿಗೆ (ಎಪಿಎಲ್‌) ಸಹ ಪಾವತಿ ಆಧಾರದಲ್ಲಿ ಚಿಕಿತ್ಸೆ ಲಭ್ಯವಾಗಲಿದೆ.

ADVERTISEMENT

ಅರ್ಹತಾ ವರ್ಗದ ರೋಗಿಗಳಿಗೆ ನಿಗದಿತ ದ್ವಿತೀಯ ಹಂತದ ಚಿಕಿತ್ಸೆಗಳಿಗೆ ಐವರು ಸದಸ್ಯರ ಕುಟುಂಬಕ್ಕೆ ವಾರ್ಷಿಕ ₹ 30,000ವರೆಗಿನ ಚಿಕಿತ್ಸಾ ಸೌಲಭ್ಯವಿದೆ. ನಿಗದಿತ ತೃತೀಯ ಹಂತದ ಚಿಕಿತ್ಸೆಗೆ ಪ್ಯಾಕೇಜ್‌ ಆಧಾರದಲ್ಲಿ ಐವರು ಸದಸ್ಯರ ಕುಟುಂಬಕ್ಕೆ ವಾರ್ಷಿಕ ₹ 1.50 ಲಕ್ಷದವರೆಗೆ ಮತ್ತು ಈ ಹಣ ಮುಗಿದ ನಂತರ ತುರ್ತು ಸಂದರ್ಭದ ಚಿಕಿತ್ಸೆಗೆ ಹೆಚ್ಚುವರಿಯಾಗಿ ₹ 50,000ವರೆಗಿನ ಚಿಕಿತ್ಸೆ ಸಿಗಲಿದೆ.

ಆದರೆ, ಸಾಮಾನ್ಯ ರೋಗಿಗಳಿಗೆ ದ್ವಿತೀಯ ಮತ್ತು ತೃತೀಯ ಹಂತದಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಪ್ಯಾಕೇಜ್‌ ದರಗಳ ವೆಚ್ಚ ಅಥವಾ ಚಿಕಿತ್ಸಾ ವೆಚ್ಚದ ಪೈಕಿ ಯಾವುದು ಕಡಿಮೆಯೋ ಅದರ ಶೇ 30ರಷ್ಟು ಹಣವನ್ನು ಸರ್ಕಾರ ಮರು ಪಾವತಿಸಲಿದೆ. ಶೇ 70ರಷ್ಟು ವೆಚ್ಚವನ್ನು ರೋಗಿಯೇ ಭರಿಸಬೇಕಾಗುತ್ತದೆ.

ಸದ್ಯ ಜಾರಿಯಲ್ಲಿರುವ ಯಶಸ್ವಿನಿ ಯೋಜನೆಯಲ್ಲಿ ಕುಟುಂಬದ ಒಬ್ಬ ವ್ಯಕ್ತಿಗೆ ₹ 2 ಲಕ್ಷ ಚಿಕಿತ್ಸಾ ವೆಚ್ಚ ಸೌಲಭ್ಯವಿದೆ. ಈ ಯೋಜನೆ ಇದೇ ಮೇ 31ಕ್ಕೆ ಅಂತ್ಯವಾಗಲಿದೆ.

ಸಾರ್ವತ್ರಿಕ ಆರೋಗ್ಯ ಕಾರ್ಡ್‌ ಪಡೆಯುವುದು ಹೇಗೆ:

ಅನಾರೋಗ್ಯಕ್ಕೆ ಒಳಗಾದಾಗ ಅಥವಾ ಅಗತ್ಯ ಬಿದ್ದಾಗ ಆಧಾರ್‌ ಕಾರ್ಡ್‌ ಮತ್ತು ಪಡಿತರ ಚೀಟಿ ಸಮೇತ ಸರ್ಕಾರಿ ಆಸ್ಪತ್ರೆಗೆ ತೆರಳಿ ₹ 10 ಪಾವತಿಸಿ ಕಾರ್ಡ್‌ ಮಾಡಿಸಿಕೊಳ್ಳಬಹುದು. ಸರ್ಕಾರದ ಪಟ್ಟಿಯಲ್ಲಿರುವ ಎಮರ್ಜೆನ್ಸಿ ಕೋಡ್‌ಗಳಿಗೆ ತುರ್ತುಸ್ಥಿತಿಯ ಸಂದರ್ಭದಲ್ಲಿ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ತೆರಳಿದರೆ ಅಲ್ಲಿಯೇ ನೋಂದಣಿ ಮಾಡಲಾಗುತ್ತದೆ.

ಆಧಾರ್‌ ಕಾರ್ಡ್‌ ಇಲ್ಲದಿದ್ದರೆ ಪಡಿತರ ಚೀಟಿ ಆಧಾರದಲ್ಲಿ ನೋಂದಾಯಿಸಿ, ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಬಹುದು. ಆಧಾರ್‌ ಕಾರ್ಡ್ ಹಾಜರುಪಡಿಸಿದ ಬಳಿಕ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಪಡಿತರ ಚೀಟಿ ಇಲ್ಲದ ಕುಟುಂಬದ ಒಬ್ಬ ಸದಸ್ಯ ಕಾರ್ಡ್ ಪಡೆದ ನಂತರ ಇತರ ಸದಸ್ಯರ ನೋಂದಣಿ ವೇಳೆ ಆ ಕಾರ್ಡ್‌ ಸಂಖ್ಯೆ ತರಬೇಕು.

ಚಿಕಿತ್ಸಾ ಸೌಲಭ್ಯ ಹೇಗೆ?

ಮೊದಲು ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಚಿಕಿತ್ಸಾ ಸೌಲಭ್ಯ ಇಲ್ಲದಿದ್ದರೆ ಸಮೀಪದ ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಅಲ್ಲೂ ಚಿಕಿತ್ಸೆ ಲಭ್ಯ ಇಲ್ಲದಿದ್ದರೆ ದ್ವಿತೀಯ ಹಂತದ ಮತ್ತು ತೃತೀಯ ಹಂತದ ಚಿಕಿತ್ಸೆಗಳಿಗೆ ನೋಂದಾಯಿತ ಖಾಸಗಿ ಆಸ್ಪತ್ರೆ ಪೈಕಿ ರೋಗಿ ಬಯಸಿದ ಆಸ್ಪತ್ರೆಗೆ ಹೋಗಲು ಅವಕಾಶವಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಸರ್ಕಾರದ ಆದೇಶದ ಪಟ್ಟಿಯಲ್ಲಿರುವ ನೋಂದಾಯಿತ ಖಾಸಗಿ ಆಸ್ಪತ್ರೆಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆಯಬಹುದು.

ಯೋಜನೆಗೆ ಒಳಪಡದವರು:

ಕಾರ್ಮಿಕರ ರಾಜ್ಯ ವಿಮಾ ಯೋಜನೆ, ನೌಕರಿ ನೀಡಿದ ಸಂಸ್ಥೆಯ ಆರೋಗ್ಯ ವಿಮೆ ರಕ್ಷಣೆ ಹೊಂದಿದವರು, ಖಾಸಗಿ ಆರೋಗ್ಯ ವಿಮೆ ಮಾಡಿಸಿಕೊಂಡವರು ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಲ್ಲಿರುವವರು ಈ ಯೋಜನೆಯ ಲಾಭ ಪಡೆಯಲು ಅವಕಾಶ ಇಲ್ಲ.

ಹೊಲದಲ್ಲಿ ದುಡಿದವನಿಗೂ ಸಕ್ಕರೆ ಕಾಯಿಲೆ!

‘ಸಕ್ಕರೆ ಕಾಯಿಲೆ ಅಂದರೆ ಹಳ್ಳಿಯಲ್ಲಿ ಶ್ರೀಮಂತರ, ಸಾಹುಕಾರರ ಕಾಯಿಲೆ ಎಂದೇ ಭಾವಿಸಲಾಗುತ್ತಿತ್ತು. ಅನ್ನ ಉಣ್ಣುತ್ತಿದ್ದವರಿಗೆ ಮಾತ್ರ ಬರುತ್ತಿತ್ತು. ಆದರೆ, ಈಗ ರಾಗಿ ತಿಂದವರಿಗೂ ಬರುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ನಾವು ನಾಲ್ವರು ಸಹೋದರರು. ನನ್ನನ್ನೂ ಒಳಗೊಂಡಂತೆ ಇಬ್ಬರಿಗೆ ಸಕ್ಕರೆ ಕಾಯಿಲೆ ಇದೆ. ನನಗೇನೋ ಈ ಕಾಯಿಲೆ ಬಂದಿದೆ ಸರಿ. ಇನ್ನೊಬ್ಬ ಹೊಲದಲ್ಲಿ ಕೆಲಸ ಮಾಡುತ್ತಿದವನಿಗೂ ಬಂದಿದೆ. ಇನ್ನೊಬ್ಬ ಕಳ್ಳಾಟ ಆಡಿ ಸಮಯ ಕಳೆಯುತ್ತಿದ್ದ. ಅವನಿಗೆ ಬಂದಿಲ್ಲ’ ಎಂದೂ ಹಾಸ್ಯ ಚಟಾಕಿ ಹಾರಿಸಿದರು.

***

ವೈದ್ಯರಲ್ಲಿ ತಜ್ಞತೆ ಇದ್ದರಷ್ಟೆ ಸಾಲದು. ಮಾನವೀಯ ಮೌಲ್ಯಗಳು ಇರಬೇಕು. ಖಾಸಗಿ ಆಸ್ಪತ್ರೆಗಳು ವ್ಯಾಪಾರಿ ಮನೋಭಾವ ಬಿಡಬೇಕು

-ಕೆ.ಆರ್‌. ರಮೇಶ್‌ ಕುಮಾರ್‌

ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.