ADVERTISEMENT

ಆರೋಗ್ಯ ಕಾರ‌್ಯಕರ್ತೆಯರ ಪ್ರತಿಭಟನೆ

ಬಿಬಿಎಂಪಿ: ವೇತನ ಹೆಚ್ಚಳ, ಸೇವೆ ಕಾಯಂಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ಬೆಂಗಳೂರು: ವೇತನ ಹೆಚ್ಚಳ ಮತ್ತಿತರ ಬೇಡಿಕೆಗಳಿಗೆ ಒತ್ತಾಯಿಸಿ ಬಿಬಿಎಂಪಿ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರ ಸಂಘದ ಸದಸ್ಯರು ಗುರುವಾರ ನಗರದ ಪುರಭವನದ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಶಶಿಕಲಾ, `ಬಿಬಿಎಂಪಿ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರ ವೇತನ ಸದ್ಯ ಕೇವಲ 3,584 ರೂಪಾಯಿ ಇದೆ. ಈ ವೇತನದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ವೇತನವನ್ನು ಹತ್ತು ಸಾವಿರ ರೂಪಾಯಿಗೆ ಹೆಚ್ಚಿಸಬೇಕು. ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರ ಸೇವೆಯನ್ನು ಕಾಯಂಗೊಳಿಸಬೇಕು' ಎಂದು ಒತ್ತಾಯಿಸಿದರು.

`ನಗರದಲ್ಲಿರುವ 84 ಬಿಬಿಎಂಪಿ ಆರೋಗ್ಯ ಕೇಂದ್ರಗಳಲ್ಲಿ 700ಕ್ಕೂ ಹೆಚ್ಚು ಮಂದಿ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದಾರೆ.
ಇವರಿಗೆ ನಾಲ್ಕು ತಿಂಗಳಿಂದ ವೇತನವನ್ನು ನೀಡಲಾಗಿಲ್ಲ. ಭವಿಷ್ಯ ನಿಧಿಯ ಲೆಕ್ಕವನ್ನೂ ಅಧಿಕಾರಿಗಳು ಸರಿಯಾಗಿ ನೀಡುತ್ತಿಲ್ಲ. ಕೂಡಲೇ ಈ ಬಗ್ಗೆ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡು ವೇತನವನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

4 ತಿಂಗಳ ವೇತನ ಶೀಘ್ರ: `ಆರೋಗ್ಯ ಸಂಪರ್ಕ ಕಾರ್ಯಕರ್ತೆಯರಿಗೆ ವೇತನ ನೀಡದೇ ಇರುವ ಕ್ರಮ ಸರಿಯಲ್ಲ. ಇದರಿಂದ ಅವರ ಜೀವನ ನಿರ್ವಹಣೆ ಕಷ್ಟವಾಗಲಿದೆ. ಶೀಘ್ರವೇ ನಾಲ್ಕು ತಿಂಗಳ ವೇತನವನ್ನು ಬಿಡುಗಡೆ ಮಾಡುವಂತೆ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಗೆ ಆದೇಶ ನೀಡಲಾಗಿದೆ' ಎಂದು ಬಿಬಿಎಂಪಿ ಹಂಗಾಮಿ ಆಯುಕ್ತ ಸಿದ್ದಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.