ADVERTISEMENT

ಆಸಿಡ್ ದಾಳಿ: ಮೂರು ವರ್ಷ ಕಠಿಣ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಮಹಿಳೆಯೊಬ್ಬರ ಮೇಲೆ ಆಸಿಡ್ ಎರಚಿದ್ದರೂ ಸಾಕ್ಷ್ಯಾಧಾರಗಳ ಕೊರತೆಯಿಂದ ಕೋರ್ಟ್‌ನಿಂದ ಖುಲಾಸೆಗೊಂಡಿದ್ದ ವ್ಯಕ್ತಿಯೊಬ್ಬನಿಗೆ ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಮೈಸೂರಿನ ಚಿಕ್ಕಬಸವಯ್ಯ ಎಂಬಾತನನ್ನು ಸೆಷನ್ಸ್ ಕೋರ್ಟ್ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಈತನ ದುಷ್ಕೃತ್ಯಕ್ಕೆ ಬಲಿಯಾದ ಅದೇ ಊರಿನ ಡಾ.ಮಹಾಲಕ್ಷ್ಮಿ ಅವರಿಗೆ 20ಸಾವಿರ ರೂಪಾಯಿ ಪರಿಹಾರ ನೀಡುವಂತೆ ಪೀಠ ಅಪರಾಧಿಗೆ ಆದೇಶಿಸಿದೆ.

2001ರ ಜ.11ರಲ್ಲಿ ಈ ಘಟನೆ ನಡೆದಿತ್ತು. ಪತಿಯಿಂದ ಪ್ರತ್ಯೇಕಗೊಂಡಿದ್ದ ಮಹಾಲಕ್ಷ್ಮಿ ಅವರನ್ನು ತಮ್ಮ ಜೊತೆ ಬರುವಂತೆ ಚಿಕ್ಕಬಸವಯ್ಯ ಪದೇ ಪದೇ ಒತ್ತಾಯಿಸುತ್ತಿದ್ದ.  ಇದರಿಂದ  ಅವರು ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ADVERTISEMENT

ಈ ದೂರನ್ನು ಹಿಂದಕ್ಕೆ ಪಡೆಯುವಂತೆ ಚಿಕ್ಕಬಸವಯ್ಯ ಒತ್ತಾಯಿಸಿದ್ದ. ಆದರೆ ಆ ರೀತಿ ಮಾಡದ ಕಾರಣ, ಆಸಿಡ್ ಎರಚಿದ್ದ.

ಆದರೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಸೆಷನ್ಸ್ ಕೋರ್ಟ್ ಆತನನ್ನು 2005 ಜೂನ್ 1ರಂದು ಖುಲಾಸೆಗೊಳಿಸಿತ್ತು. ಆದರೆ ಆತ ಕೃತ್ಯ ಎಸಗಿರುವ ಬಗ್ಗೆ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ ಅವರು ಸೂಕ್ತ ಸಾಕ್ಷ್ಯಾಧಾರಗಳನ್ನು ಹೈಕೋರ್ಟ್‌ಗೆ ಒದಗಿಸಿದರು. ಅದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು ಆತನಿಗೆ ಶಿಕ್ಷೆ ವಿಧಿಸಿ ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.