ADVERTISEMENT

ಆಸ್ತಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ; ರಾಜ್ಯದಾದ್ಯಂತ ವಿಸ್ತರಣೆ: ಸಿಎಂ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:30 IST
Last Updated 2 ಮಾರ್ಚ್ 2012, 19:30 IST
ಆಸ್ತಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ; ರಾಜ್ಯದಾದ್ಯಂತ ವಿಸ್ತರಣೆ: ಸಿಎಂ
ಆಸ್ತಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ; ರಾಜ್ಯದಾದ್ಯಂತ ವಿಸ್ತರಣೆ: ಸಿಎಂ   

ಬೆಂಗಳೂರು: ಆಸ್ತಿ ತೆರಿಗೆ ವಂಚನೆ ಪ್ರಕರಣಗಳನ್ನು ಸುಲಭವಾಗಿ ಪತ್ತೆ ಮಾಡಿ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಅನುಕೂಲವಾಗುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ತಂದಿರುವ ಆಸ್ತಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಯೋಜನೆಯನ್ನು ರಾಜ್ಯದ ಎಲ್ಲ ಭಾಗಗಳಿಗೂ ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಶುಕ್ರವಾರ ಇಲ್ಲಿ ಹೇಳಿದರು.

ಬಿಬಿಎಂಪಿಯು ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರಿನಲ್ಲಿ ಈಗಾಗಲೇ ಜಾರಿಗೆ ತಂದಿರುವ `ನಗರ ಆಸ್ತಿ ನೋಂದಣಿ~ ಕಾರ್ಯಕ್ರಮವನ್ನು ಕೂಡ ರಾಜ್ಯದಾದ್ಯಂತ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

`ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದ ಮೂಲಕ ಜಗತ್ತಿನಲ್ಲಿಯೇ ವಿಶಿಷ್ಟ ಸ್ಥಾನಮಾನ ಪಡೆದಿರುವ ಬೆಂಗಳೂರು ಭೂ ಅವ್ಯವಹಾರ ಹಾಗೂ ತೆರಿಗೆ ವಂಚನೆ ಪ್ರಕರಣಗಳಿಂದಲೂ ಕೆಟ್ಟ ಹೆಸರು ಪಡೆಯುವಂತಾಗಿದೆ. ಭೂಮಾಫಿಯಾ ಹಾಗೂ ತೆರಿಗೆ ಕಳ್ಳರಿಗೆ ಕಡಿವಾಣ ಹಾಕಬೇಕಾದರೆ ಇಂತಹ ಕಾರ್ಯಕ್ರಮಗಳು ಜಾರಿಯಾಗಬೇಕು. ಸಮಾಜಕ್ಕೂ ಇದು ಅನಿವಾರ್ಯವಾಗಿದೆ~ ಎಂದರು.

ಬಿಬಿಎಂಪಿಗೆ ಶಹಭಾಷ್‌ಗಿರಿ: ದೇಶದಲ್ಲಿಯೇ ಪ್ರಥಮ ಬಾರಿಗೆ ಆಸ್ತಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಯೋಜನೆಯನ್ನು ಜಾರಿಗೆ ತಂದಿರುವ ಬಿಬಿಎಂಪಿಗೆ ಶಹಭಾಷ್‌ಗಿರಿ ನೀಡಿದ ಮುಖ್ಯಮಂತ್ರಿಗಳು, `ಆ ಮೂಲಕ ಭೂಮಾಫಿಯಾ, ತೆರಿಗೆ ಕಳ್ಳರು ಹಾಗೂ ಭ್ರಷ್ಟಾಚಾರಿಗಳಿಗೆ ಕಡಿವಾಣ ಹಾಕಬೇಕಾಗಿದೆ. ಇದು ಸುಲಭದ ಕೆಲಸವಲ್ಲ. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ಇಚ್ಛಾಶಕ್ತಿ  ಪ್ರದರ್ಶಿಸಬೇಕು~ ಎಂದು ಕೋರಿದರು.

`ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಅಂತೆಯೇ, ನಾಗರಿಕರು ಕೂಡ ತಮ್ಮ ಜವಾಬ್ದಾರಿ ಅರಿತು ಸಕಾಲದಲ್ಲಿ ತೆರಿಗೆ ಪಾವತಿಸಲು ಮುಂದಾಗಬೇಕು~ ಎಂದು ಮನವಿ ಮಾಡಿದರು.

ಮೈಸೂರಿನಲ್ಲಿ ಜಾರಿಗೆ ತಂದಿರುವ ನಗರ ಆಸ್ತಿ ನೋಂದಣಿ ಯೋಜನೆಯಿಂದ 1.02 ಲಕ್ಷದಷ್ಟಿದ್ದ ಆಸ್ತಿಗಳ ಸಂಖ್ಯೆ ಸುಮಾರು 1.76 ಲಕ್ಷದಷ್ಟು ಹೆಚ್ಚಾಗಿದೆ. ಇದರಿಂದ ಸುಮಾರು ಬೇರೆ ಬೇರೆ ಕಡೆಗಳಲ್ಲಿ ಒತ್ತುವರಿಯಾಗಿದ್ದ 30ರಿಂದ 35 ಸರ್ಕಾರಿ ಜಾಗವನ್ನು ಗುರುತಿಸಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.

3000 ಕೋಟಿ ಆಸ್ತಿ ತೆರಿಗೆ ಸಂಗ್ರಹ ನಿರೀಕ್ಷೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ 11 ಲಕ್ಷ ಆಸ್ತಿದಾರರು ತೆರಿಗೆ ಪಾವತಿಸುತ್ತಿದ್ದರು. ಭೌಗೋಳಿಕ ಮಾಹಿತಿ ವ್ಯವಸ್ಥೆ ಮೂಲಕ 16.19 ಲಕ್ಷ ಆಸ್ತಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಿ ತೆರಿಗೆ ಜಾಲ ವ್ಯಾಪ್ತಿಗೆ ತರುವುದರಿಂದ ಮುಂದಿನ ದಿನಗಳಲ್ಲಿ 3000 ಕೋಟಿ ರೂಪಾಯಿಗಳಷ್ಟು ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಸಿಎಂ ಹೇಳಿದರು.

ಮುಂದಿನ ದಿನಗಳಲ್ಲಿ ಕೊಳೆಗೇರಿಗಳಲ್ಲಿಯೂ ಸರ್ಕಾರಿ ಆಸ್ತಿಯನ್ನು ಗುರುತಿಸುವ ಪ್ರಕ್ರಿಯೆ ನಡೆಯಬೇಕು ಎಂದು ಸಲಹೆ ಮಾಡಿದ ಮುಖ್ಯಮಂತ್ರಿಗಳು, ಆಡಳಿತದಲ್ಲಿ ಪಾರದರ್ಶಕತೆ ತಂದು ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ವೇಗದ ಹೆಜ್ಜೆಯನ್ನಿಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಬಿಎಂಪಿ ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥರಾಜು, ಪಾಲಿಕೆ ವ್ಯಾಪ್ತಿಯಲ್ಲಿ ಈ ವರ್ಷ 1500 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಇದುವರೆಗೆ 1200 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ ಎಂದರು.

ಮೇಯರ್ ಪಿ. ಶಾರದಮ್ಮ ಮಾತನಾಡಿದರು. ಪಾಲಿಕೆ ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಸ್ವಾಗತಿಸಿದರು. ಸಚಿವ ಆರ್. ಅಶೋಕ, ವಿಧಾನ ಪರಿಷತ್ತಿನ ಉಪ ಸಭಾಪತಿ ವಿಮಲಾಗೌಡ, ಶಾಸಕರಾದ ಬಿ.ಎನ್. ವಿಜಯಕುಮಾರ್, ಡಾ. ಹೇಮಚಂದ್ರಸಾಗರ್, ಡಾ.ಸಿ.ಎನ್. ಅಶ್ವತ್ಥನಾರಾಯಣ, ಮುನಿರಾಜು, ಉಪ ಮೇಯರ್ ಹರೀಶ್, ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್, ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ, ವಿಶೇಷ ಆಯುಕ್ತ ಕೆ.ಆರ್. ನಿರಂಜನ್ ಭಾಗವಹಿಸಿದ್ದರು.

ಪ್ರಯೋಜನವೇನು?
ಪರಿಣಾಮಕಾರಿಯಾಗಿ ತೆರಿಗೆ ವ್ಯವಸ್ಥೆ ಜಾರಿಗೆ ತರುವುದು, ಆಸ್ತಿ ತೆರಿಗೆ ವಂಚನೆ ಪ್ರಕರಣಗಳನ್ನು ಗುರುತಿಸಿ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬಹುದು. ವಾಸ, ವಾಣಿಜ್ಯ ಅಥವಾ ಇತರೆ ಉಪಯೋಗಗಳನ್ನು ಸ್ಪಷ್ಟವಾಗಿ ಗುರುತಿಸಲು ಉಪಯೋಗ.

ತೆರಿಗೆ ದರಗಳಲ್ಲಿ ಉಂಟಾಗುವ ಬದಲಾವಣೆಗಳನ್ನು ಸುಲಲಿತವಾಗಿ ಅಳವಡಿಸಲು ಅನುಕೂಲ. ಎಲ್ಲ ಆಸ್ತಿ ತೆರಿಗೆ ಪಾವತಿದಾರರು ಮಾಹಿತಿ ತಂತ್ರಾಂಶದ ಸೇವೆ ಪಡೆಯಲು ಸಹಕಾರಿ. ಎಲ್ಲ ಆಸ್ತಿ ವಿವರಗಳನ್ನು ಸಾರ್ವಜನಿಕ ಪರಿವೀಕ್ಷಣೆಗೆ ಒದಗಿಸುವ ಮೂಲಕ ತೆರಿಗೆ ವಂಚನೆ ತಡೆಗಟ್ಟಲು ಅನುಕೂಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.