ADVERTISEMENT

ಆಸ್ತಿ ವಿವರ ಕೊಡದ ಶಾಸಕರು

ಲೋಕಾಯುಕ್ತರಿಂದ ರಾಜ್ಯಪಾಲರಿಗೆ ವರದಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:43 IST
Last Updated 3 ಏಪ್ರಿಲ್ 2013, 19:43 IST

ಬೆಂಗಳೂರು: 2011-12ನೇ ಸಾಲಿನ ಆಸ್ತಿ ವಿವರವನ್ನು ಸಕಾಲಕ್ಕೆ ಸಲ್ಲಿಸದ ವಿಧಾನಸಭೆಯ ಐವರು ಮತ್ತು ವಿಧಾನ ಪರಿಷತ್‌ನ ನಾಲ್ವರು ಸದಸ್ಯರ ವಿರುದ್ಧ ಲೋಕಾಯುಕ್ತ ವೈ.ಭಾಸ್ಕರ ರಾವ್ ಇತ್ತೀಚೆಗೆ ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದಾರೆ.

ವಿಧಾನಸಭೆ ಸದಸ್ಯರಾದ ವಿಠಲ ಕಟಕದೋಂಡ, ರಾಮಣ್ಣ ಎಸ್.ಲಮಾಣಿ, ಶ್ರೀಶೈಲಪ್ಪ ಬಿದರೂರು, ಚಂದ್ರಕಾಂತ ಬೆಲ್ಲದ (ನಾಲ್ವರೂ ಬಿಜೆಪಿ), ಅನಿತಾ ಕುಮಾರಸ್ವಾಮಿ (ಜೆಡಿಎಸ್) ಹಾಗೂ ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ, ರಘುನಾಥರಾವ್ ಮಲ್ಕಾಪುರೆ, ಶಶಿಲ್ ಜಿ.ನಮೋಶಿ (ಮೂವರೂ ಬಿಜೆಪಿಯವರು), ಸೈಯದ್ ಮುದೀರ್ ಆಗಾ (ಜೆಡಿಎಸ್) ಮಾಹಿತಿ ಸಲ್ಲಿಸುವಲ್ಲಿ ವಿಫಲರಾದ ಜನಪ್ರತಿನಿಧಿಗಳು.

ಲೋಕಾಯುಕ್ತ ಕಾಯ್ದೆಯ ಕಲಂ 22ರ ಪ್ರಕಾರ ಲೋಕಾಯುಕ್ತರ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಚುನಾಯಿತ ಪ್ರತಿನಿಧಿಗಳು ಪ್ರತಿ ವರ್ಷ ಜೂನ್ 30ರೊಳಗೆ ತಮ್ಮ ಆಸ್ತಿ ಮತ್ತು ಋಣಭಾರದ ವಿವರಗಳನ್ನು ಪ್ರಮಾಣಪತ್ರದ ಮೂಲಕ ಸಲ್ಲಿಸಬೇಕು. ಒಂಬತ್ತು ಶಾಸಕರು ಕಳೆದ ವರ್ಷ ನಿಗದಿತ ಗಡುವಿನೊಳಗೆ ಪ್ರಮಾಣಪತ್ರ ಸಲ್ಲಿಸಿರಲಿಲ್ಲ. ಆಗ ಲೋಕಾಯುಕ್ತರ ಹುದ್ದೆ ಖಾಲಿ ಇದ್ದ ಕಾರಣದಿಂದ ಪರಿಶೀಲನೆ ನಡೆದಿರಲಿಲ್ಲ. ಇತ್ತೀಚೆಗೆ ಈ ಕುರಿತು ಪರಿಶೀಲನೆ ನಡೆಸಿದ ಲೋಕಾಯುಕ್ತರು, ಇವರೆಲ್ಲರ ವಿರುದ್ಧ ವರದಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.