ADVERTISEMENT

ಆಸ್ಪತ್ರೆಯಿಂದ ನವಜಾತ ಶಿಶು ಹೊತ್ತೊಯ್ದ ಮಹಿಳೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 20:09 IST
Last Updated 21 ಡಿಸೆಂಬರ್ 2012, 20:09 IST

ಬೆಂಗಳೂರು: ನವಜಾತ ಶಿಶುವನ್ನು ಮಹಿಳೆಯೊಬ್ಬಳು ಹೊತ್ತೊಯ್ದಿರುವ ಘಟನೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಶುಕ್ರವಾರ ಹಾಡಹಗಲೇ ನಡೆದಿದೆ.

ಈ ಸಂಬಂಧ ದೇವನಹಳ್ಳಿ ತಾಲ್ಲೂಕಿನ ಸಿಂಗರಹಳ್ಳಿ ನಿವಾಸಿ ಮಂಜುನಾಥ್ ಎಂಬುವರು ವಿಕ್ಟೋರಿಯಾ ಆಸ್ಪತ್ರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಂಜುನಾಥ್, ಪತ್ನಿ ವಸಂತಾ ಅವರನ್ನು ಹೆರಿಗೆಗಾಗಿ ಗುರುವಾರ ಮಧ್ಯಾಹ್ನ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿದ್ದರು. ವಸಂತಾ ಅವರಿಗೆ ಶುಕ್ರವಾರ ನಸುಕಿನಲ್ಲಿ ಗಂಡು ಮಗು ಜನಿಸಿತ್ತು.

ಮಂಜುನಾಥ್ ದಂಪತಿ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ವಾರ್ಡ್‌ನಲ್ಲಿ ನಿದ್ರಿಸುತ್ತಿದ್ದರು. ಈ ವೇಳೆ ವಸಂತಾ ಅವರ ತಾಯಿ ಸಾವಿತ್ರಮ್ಮ ಅವರು ಮಗುವನ್ನು ನೋಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಅವರ ವಾರ್ಡ್‌ಗೆ ಬಂದ ಅಪರಿಚಿತ ಮಹಿಳೆ, ಸಾವಿತ್ರಮ್ಮ ಅವರಿಗೆ 500 ರೂಪಾಯಿ ಹಣ ಕೊಟ್ಟು ಹೋಟೆಲ್‌ನಿಂದ ಕಾಫಿ ತರುವಂತೆ ಕೇಳಿಕೊಂಡಿದ್ದಾಳೆ. ಸಾವಿತ್ರಮ್ಮ, ಕಾಫಿ ತರಲು ಹೋಟೆಲ್‌ಗೆ ಹೋಗಿದ್ದಾಗ ಆ ಮಹಿಳೆ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಆಸ್ಪತ್ರೆಯ ಆವರಣದಲ್ಲಿ ಒಟ್ಟು ಏಳು ಕಡೆ ಸಿ.ಸಿ ಟಿ.ವಿ ಕ್ಯಾಮೆರಾಗಳಿವೆ. ಅವುಗಳಲ್ಲಿ ಮೂರು ಕ್ಯಾಮೆರಾಗಳಲ್ಲಿ ಆ ಮಹಿಳೆ ಮಗುವನ್ನು ಎತ್ತಿಕೊಂಡು ಹೋಗುವ ದೃಶ್ಯ ದಾಖಲಾಗಿದೆ. ಆದರೆ, ಆ ದೃಶ್ಯಗಳಲ್ಲಿ ಮಹಿಳೆಯ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಮಹಿಳೆ ಆಸ್ಪತ್ರೆಯ ಹಿಂದಿನ ಪ್ರವೇಶ ದ್ವಾರದ ಮೂಲಕ ಹೊರ ಹೋಗಿದ್ದಾಳೆ. ಆ ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಆಸ್ಪತ್ರೆಗೆ ಔಷಧ ಮತ್ತಿತರ ವಸ್ತುಗಳನ್ನು ತರುವ ವಾಹನಗಳು ಆ ಪ್ರವೇಶ ದ್ವಾರದ ಮೂಲಕ ಬಂದು ಹೋಗುತ್ತವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್‌ಗಳ ಕೊರತೆ ಇದೆ. ಈ ಕಾರಣದಿಂದಲೇ ಆಗಾಗ್ಗೆ ಇಂತಹ ಘಟನೆಗಳು ನಡೆಯುತ್ತಿವೆ. ಘಟನೆ ಸಂಬಂಧ ಶನಿವಾರ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸೆಕ್ಯುರಿಟಿ ಗಾರ್ಡ್‌ಗಳ ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.