ADVERTISEMENT

‘ಆಹಾರ ಉತ್ಪಾದನೆಯಲ್ಲಿ ಉತ್ತಮ ಪ್ರಗತಿ’

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 20:09 IST
Last Updated 5 ಅಕ್ಟೋಬರ್ 2017, 20:09 IST
ನರೇಂದ್ರಸಿಂಗ್‌ ರಾಥೋರ್‌ ಅವರು ವಾರಣಾಸಿಯ ಭಾರತೀಯ ತರಕಾರಿಗಳ ಸಂಶೋಧನಾ ಕೇಂದ್ರದ ನಿರ್ದೇಶಕ ಬಿಜೇಂದ್ರ ಸಿಂಗ್‌ ಅವರಿಗೆ ‘ಕಾಳಯ್ಯ ಕೃಷ್ಣಮೂರ್ತಿ ರಾಷ್ಟ್ರೀಯ ಅತ್ಯುತ್ತಮ ಕೃಷಿ ಸಂಶೋಧನಾ ಪ್ರಶಸ್ತಿ’ ನೀಡಿದರು. ಎಚ್‌.ಶಿವಣ್ಣ ಇದ್ದರು
ನರೇಂದ್ರಸಿಂಗ್‌ ರಾಥೋರ್‌ ಅವರು ವಾರಣಾಸಿಯ ಭಾರತೀಯ ತರಕಾರಿಗಳ ಸಂಶೋಧನಾ ಕೇಂದ್ರದ ನಿರ್ದೇಶಕ ಬಿಜೇಂದ್ರ ಸಿಂಗ್‌ ಅವರಿಗೆ ‘ಕಾಳಯ್ಯ ಕೃಷ್ಣಮೂರ್ತಿ ರಾಷ್ಟ್ರೀಯ ಅತ್ಯುತ್ತಮ ಕೃಷಿ ಸಂಶೋಧನಾ ಪ್ರಶಸ್ತಿ’ ನೀಡಿದರು. ಎಚ್‌.ಶಿವಣ್ಣ ಇದ್ದರು   

ಬೆಂಗಳೂರು: ‘ದೇಶದಲ್ಲಿ ಕಳೆದ ವರ್ಷ 25.3 ಕೋಟಿ ಟನ್‌ ಆಹಾರ ಉತ್ಪಾದನೆಯಾಗಿತ್ತು. ಪ್ರಸಕ್ತ ವರ್ಷ ಇದು 27.6 ಕೋಟಿಗೆ ಏರಿಕೆಯಾಗಿದೆ’ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪಮಹಾನಿರ್ದೇಶಕ ನರೇಂದ್ರಸಿಂಗ್‌ ರಾಥೋರ್‌ ತಿಳಿಸಿದರು.

ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಕೃಷಿ ವಿಶ್ವವಿದ್ಯಾಲಯದ 52ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆಹಾರ ಉತ್ಪಾದನೆ ಏರಿಕೆಯಾಗಿರುವುದು ಉತ್ತಮ ಬೆಳವಣಿಗೆ. ನಮ್ಮಲ್ಲಿರುವ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಂಡು ಮತ್ತಷ್ಟು ಸಾಧನೆ ಮಾಡಬೇಕು’ ಎಂದು ಹೇಳಿದರು.

ADVERTISEMENT

‘29.9 ಕೋಟಿ ಟನ್ ಹಣ್ಣು –ತರಕಾರಿ ಹಾಗೂ 16 ಕೋಟಿ ಟನ್‌ ಹಾಲು ಉತ್ಪಾದನೆಯಾಗಿದೆ. ಹಲವು ವರ್ಷಗಳಿಂದ ಹಾಲು ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಮೊದಲನೇ ಸ್ಥಾನ ಕಾಯ್ದುಕೊಂಡು ಬಂದಿರುವುದು ಹೆಮ್ಮೆಯ ಸಂಗತಿ’ ಎಂದರು.

‘ಪರಿಷತ್ತಿನಿಂದ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ಸಂಸ್ಥೆಗಳಿಗೆ ಬಿಡುಗಡೆ ಮಾಡುವ ಹಣವನ್ನು ನಿರ್ದಿಷ್ಟ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕು. ವಿಶ್ವವಿದ್ಯಾಲಯಗಳ ಆಡಳಿತ ಮತ್ತಷ್ಟು ಬಲಗೊಳಿಸಲು ಪರಿಷತ್ತಿನಿಂದ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ’ ಎಂದು ಹೇಳಿದರು.

‘ದೇಶದಲ್ಲಿ 75 ಕೃಷಿ ವಿಶ್ವವಿದ್ಯಾಲಯಗಳಿದ್ದು, ಕೃಷಿಯಲ್ಲಿ ತೊಡಗಿರುವ ರೈತರ ಸಂಖ್ಯೆ ಶೇ 53ರಷ್ಟಿದೆ. ಇದಕ್ಕೆ ಹೋಲಿಸಿದರೆ ಕೃಷಿ ವಿಶ್ವವಿದ್ಯಾಲಯಗಳ ಸಂಖ್ಯೆ ಕಡಿಮೆ. ದೇಶದಲ್ಲಿರುವ ಒಟ್ಟು ಪದವಿದರರಲ್ಲಿ ಶೇ 36ರಷ್ಟು ಮಂದಿ ಕೃಷಿ ಪದವಿದರರು. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಾಗಬೇಕು’ ಎಂದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಚ್‌.ಶಿವಣ್ಣ, ‘ಪ್ರಸಕ್ತ ವರ್ಷ ಕೃಷಿ ಪದವಿಗಳಿಗೆ ದಾಖಲಾತಿ ಬಯಸಿ, 95,000 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದರು. ಅದರಲ್ಲಿ 3,500 ವಿದ್ಯಾರ್ಥಿಗಳಿಗೆ ಪ್ರವೇಶ ದೊರೆತಿದೆ’ ಎಂದು ತಿಳಿಸಿದರು.

ವಿವಿಧ ಕೃಷಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.