ADVERTISEMENT

ಆಹಾರ ಪ್ರಿಯರ ಮನಗೆದ್ದ ಏಡಿ ಖಾದ್ಯಗಳು

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 20:09 IST
Last Updated 16 ಜುಲೈ 2017, 20:09 IST
ತಿಗಳ ಕ್ಷತ್ರಿಯ ಸಮಾಜದವರು ದೊಡ್ಡ ಗಾತ್ರದ ಏಡಿಗಳನ್ನು ಪ್ರದರ್ಶಿಸಿದರು
ತಿಗಳ ಕ್ಷತ್ರಿಯ ಸಮಾಜದವರು ದೊಡ್ಡ ಗಾತ್ರದ ಏಡಿಗಳನ್ನು ಪ್ರದರ್ಶಿಸಿದರು   

ಬೆಂಗಳೂರು: ವಿಶ್ವ ಕ್ಷತ್ರಿಯ ಮಹಾಸಂಸ್ಥಾನದ ವತಿಯಿಂದ ತುಮಕೂರು ರಸ್ತೆಯ ನೀಲಕಂಠ ಕನ್ವೆನ್ಷನ್‌ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ‘ಕ್ಷತ್ರಿಯ ಆಹಾರ ಮೇಳ’ಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಏಡಿಗಳಿಂದ ತಯಾರಿಸಿದ್ದ ಐದು ಬಗೆಯ ಖಾದ್ಯಗಳು, ನಾಟಿ ಸೀಗಡಿ, ನಾಟಿಕೋಳಿ, ಕೆರೆಮೀನು, ಮೇಕೆ ಮಾಂಸದಿಂದ ತಯಾರಿಸಿದ್ದ 25ಕ್ಕೂ ಹೆಚ್ಚಿನ ಖಾದ್ಯಗಳು ಆಹಾರ ಪ್ರಿಯರ ಜಿಹ್ವಾ ಚಾಪಲ್ಯವನ್ನು ತಣಿಸಿದವು.

ಮುದ್ದೆ, ಬಸ್ಸಾರು, ಸೊಪ್ಪು ಸಾರು, ಮೊಳಕೆ ಕಾಳು ಸಾರು, ಕಾಯಿ ಪಲ್ಯಗಳೂ ಲಭ್ಯ ಇದ್ದವು. ಮೇಳದಲ್ಲಿ ಪಾಲ್ಗೊಂಡಿದ್ದ ಜನರು ತಮಗಿಷ್ಟದ ಖಾದ್ಯಗಳನ್ನು ಸವಿದರು.

ADVERTISEMENT

ಮೇಳದ ಆಕರ್ಷಣೆ: ಏಡಿ ಹಾಗೂ ಮೀನು ಹಿಡಿಯುವ ಸ್ಪರ್ಧೆ, ಸೆಲ್ಫಿ ವಿಥ್ ಬಿಗ್ ಕ್ರ್ಯಾಬ್, ಗರಡಿಯ ಕಸರತ್ತಿನ ಪ್ರಾತ್ಯಕ್ಷಿಕೆ, ಕತ್ತಿ ಹಾಗೂ ದೊಣ್ಣೆವರಸೆಯ ಬಿರುಸು ನೋಟ, ತಿಗಳರ ಸಾಂಪ್ರದಾಯಿಕ ವಸ್ತುಗಳ ಪ್ರದರ್ಶನ, ತಿಗಳರ ತರಕಾರಿ ಸಂತೆ, ಕ್ಷತ್ರಿಯರ ಆಯುಧಗಳ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.

ವಿಶ್ವ ಕ್ಷತ್ರಿಯ ಮಹಾ ಸಂಸ್ಥಾನದ ಅಧ್ಯಕ್ಷ ಎಂ.ಡಿ.ಪ್ರಕಾಶ್‌ ಮಾತನಾಡಿ, ‘ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶಗಳಲ್ಲಿ ಸಾಕಣೆ ಮಾಡಿದ ಏಡಿಗಳನ್ನು ಮೇಳಕ್ಕೆ ತರಿಸಲಾಗಿದೆ. ನಮ್ಮ ರಾಜ್ಯದಲ್ಲೂ ಏಡಿಗಳನ್ನು ಸಾಕಬಹುದು. ಈಗಾಗಲೇ ಕೆಲ ಭಾಗಗಳಲ್ಲಿ ಏಡಿ ಹೊಂಡಗಳನ್ನು ನಿರ್ಮಿಸಲಾಗಿದ್ದು, ಏಡಿ ಸಾಕಣೆ ಆರಂಭವಾಗಿದೆ’ ಎಂದರು.

‘ಕ್ಷತ್ರಿಯ ಆಹಾರ ಮೇಳದ ಆಯೋಜನೆಯ ಮೂಲಕ ರಾಜ್ಯದಲ್ಲಿ ಏಡಿ ಸಾಕಣೆ,  ಮಾರಾಟ ಕೇಂದ್ರ ತೆರೆಯುವ ಉದ್ದೇಶ ಹೊಂದಿದ್ದೇವೆ’ ಎಂದರು.
‘ಏಡಿಗಳಿಂದ ತಯಾರಿಸಿದ ಖಾದ್ಯಗಳು ಸಮುದಾಯದ ಸಾಂಪ್ರದಾಯಿಕ ಆಹಾರ. ಇವು ಹೆಚ್ಚಿನ ಪೌಷ್ಟಿಕಾಂಶ ಹೊಂದಿವೆ. ಆದರೆ, ಏಡಿಯ ಖಾದ್ಯಗಳು ಪಂಚತಾರಾ ಹೋಟೆಲ್‌ಗಳ ಮೆನುಗಳಲ್ಲಷ್ಟೇ ಕಾಣಬಹುದು. ಈ ಆಹಾರ ಪದ್ಧತಿಯನ್ನು ಜನಪ್ರಿಯಗೊಳಿಸಲು ಆಹಾರ ಮೇಳ ಹಮ್ಮಿಕೊಂಡಿದ್ದೇವೆ’ ಎಂದರು.

ಮೇಳವನ್ನು ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.