ADVERTISEMENT

`ಇಂಡಿಯನ್ ಪ್ಲಾಟ್‌ಫಾರಂ' ಜೊತೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 18:53 IST
Last Updated 2 ಏಪ್ರಿಲ್ 2013, 18:53 IST

ಬೆಂಗಳೂರು: ಅಮೃತ ವಿಶ್ವವಿದ್ಯಾಲಯದಲ್ಲಿ `ಇಂಡಿಯನ್ ಪ್ಲಾಟ್‌ಫಾರಂ' ವತಿಯಿಂದ ಭಾರತ ಮತ್ತು ಯೂರೋಪ್ ಅಂತರರಾಷ್ಟ್ರೀಯ ಮಟ್ಟದ ಮೂರು ದಿನಗಳ ಸಂಶೋಧನೆ ಕುರಿತು ಚರ್ಚಾ ಕಾರ್ಯಕ್ರಮ `ಸಂಯೋಗ' ಮಂಗಳವಾರ ಪ್ರಾರಂಭಗೊಂಡಿತು.

ನಗರದಲ್ಲಿ ನಡೆಯುತ್ತಿರುವ `ಸಂಯೋಗ' ಕಾರ್ಯಕ್ರಮದಲ್ಲಿ ಭಾರತದ 12 ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಯುರೋಪಿನ 8 ವಿಶ್ವವಿದ್ಯಾವಿದ್ಯಾಲಯಗಳು `ಇಂಡಿಯನ್ ಪ್ಲಾಟ್‌ಫಾರಂ' ಜೊತೆ ಪರಸ್ಪರ ವಿನಿಮಯ ಒಪ್ಪಂದ ಮಾಡಿಕೊಳ್ಳಲಿವೆ. ಅಲ್ಲದೆ ಮಾಹಿತಿ, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆಯನ್ನು ಪರಸ್ಪರ ವಿನಿಮಯ ಮಾಡುವ ಕುರಿತು ಮಾತುಕತೆ ನಡೆಸಲಿವೆ.

ಅಮೃತ ವಿವಿಯ ಕುಲಪತಿ ಡಾ.ಪಿ.ವೆಂಕಟರಂಗನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, `ಭಾರತ ಯುವಕರ ರಾಷ್ಟ್ರವಾಗಿದ್ದು, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ಸಾಧಿಸಬೇಕಿರುವುದು ಸಾಕಷ್ಟಿದೆ. ದೇಶದಲ್ಲಿ ಮೂಲ ಸೌಕರ್ಯ ವೃದ್ಧಿ, ಮಾನವ ಸಂಪನ್ಮೂಲಗಳ ಪರಿಪೂರ್ಣ ಬಳಕೆ, ನೈಸರ್ಗಿಕ ಸಂಪನ್ಮೂಲಗಳ ಉಪಯೋಗ, ಪರಿಸರ ಮಾಲಿನ್ಯ ನಿಯಂತ್ರಣ ಕುರಿತು ಸುದೀರ್ಘ ಸಂಶೋಧನೆ ಅಗತ್ಯವಿದೆ. ಯುರೋಪಿನ ತಂತ್ರಜ್ಞಾನವನ್ನು ಬಳಸಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವೇದಿಕೆ ಸಿದ್ಧವಾಗಿದೆ' ಎಂದು ಹೇಳಿದರು.

ನೆದರ್‌ಲ್ಯಾಂಡ್‌ನ ಪ್ರತಿನಿಧಿ ಜೆಲ್ಲೆ ನೀಡಂ ಮಾತನಾಡಿ, `ಭಾರತದಲ್ಲಿ ನಿರುದ್ಯೋಗ, ಬಡತನ ದೊಡ್ಡ ಸವಾಲಾಗಿದ್ದು, ಯುರೋಪಿನ ತಂತ್ರಜ್ಞಾನ ಬಳಸಿ ಅದನ್ನು ನಿವಾರಿಸಬಹುದು. ಮಾಹಿತಿ ಮತ್ತು ತಂತ್ರಜ್ಞಾನ ಯಾವುದೇ ವ್ಯಕ್ತಿ ಅಥವಾ ದೇಶಕ್ಕೆ ಸೀಮಿತವಾದುದಲ್ಲ. ಮಾನವೀಯತೆಯಿಂದ ಅದನ್ನು ವಿನಿಮಯ ಮಾಡಿಕೊಂಡರೆ ಸಮಾಜ ಅಭಿವೃದ್ಧಿ ಹೊಂದುತ್ತದೆ' ಎಂದು ಆಶಯ ವ್ಯಕ್ತಪಡಿಸಿದರು.

ಬೆಲ್ಜಿಯಂನ ಪ್ರತಿನಿಧಿ ಆಂಟೋನಿ ಎರ್ವಾರ್ಡ್ ಮಾತನಾಡಿ, `ಜಾಗತಿಕ ಮತ್ತು ರಾಷ್ಟ್ರೀಯ ಸವಾಲುಗಳನ್ನು ಎದುರಿಸಲು ಯುರೋಪಿನ ವಿವಿಗಳ ಜೊತೆ ಭಾರತದ ಶಿಕ್ಷಣ ಸಂಸ್ಥೆ ಪರಸ್ಪರ ವಿನಿಮಯ ಒಪ್ಪಂದ ಮಾಡಿರುವುದು ಉತ್ತಮ ಹೆಜ್ಜೆಯಾಗಿದೆ' ಎಂದರು.

ಇದೇ ಸಂದರ್ಭದಲ್ಲಿ `ಇಂಡಿಯನ್ ಪ್ಲಾಟ್‌ಫಾರಂ' ಜೊತೆ ಐಎಫ್‌ಐಎಂ, ಜ್ಯೋತಿ ಗ್ರೂಪ್, ಆಳ್ವಾಸ್ ಶಿಕ್ಷಣ ಸಂಸ್ಥೆ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಬಿಎನ್‌ಎಂ ತಾಂತ್ರಿಕ ಶಿಕ್ಷಣ ಸಂಸ್ಥೆ ಒಪ್ಪಂದಕ್ಕೆ ಸಹಿ ಹಾಕಿದವು.

`ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, `ಜಾಗತೀಕರಣದ ಈ ಕಾಲಘಟ್ಟದಲ್ಲಿ ನಾವು ವಿಶಾಲ ಮನೋಭಾವದಿಂದ ಯೋಚಿಸಬೇಕಿದೆ. ಈ ಒಪ್ಪಂದದಿಂದ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಯುರೋಪ್ ದೇಶಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹರಿದುಬರುವ ನಿರೀಕ್ಷೆಯಿದೆ. ನಾವು ಮುಕ್ತ ಮನಸ್ಸಿನಿಂದ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ' ಎಂದು ಅಭಿಪ್ರಾಯಪಟ್ಟರು.

ಬೆಲ್ಜಿಯಂ ವಿಶ್ವವಿದ್ಯಾಲಯದ ಪ್ರತಿನಿಧಿ ಕೋಯೆನ್ ಜೋಂತಲ್ಸ್, ಇಂಡಿಯನ್ ಪ್ಲಾಟ್‌ಫಾರಂನ ಎಸ್.ಎನ್.ಬಾಲಗಂಗಾಧರ, ಅಲೆಕ್ಸಾಂಡರ್ ನಾಸೆನ್ಸ್, ಅಮೃತ ಅಂತರರಾಷ್ಟ್ರೀಯ ಕಾರ್ಯಕ್ರಮಗಳ ನಿರ್ದೇಶಕಿ ಡಾ.ಮನೀಷಾ ವಿ. ರಮೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.