ADVERTISEMENT

‘ಇಂದಿರಾ ಕ್ಯಾಂಟೀನ್‌ಗೆ ರಜೆ ನೀಡಿ’

ಇಂದಿರಾ ಕ್ಯಾಂಟಿನ್‌, ಭಾನುವಾರ ಬಂದ್‌ ಇಲ್ಲ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
‘ಇಂದಿರಾ ಕ್ಯಾಂಟೀನ್‌ಗೆ ರಜೆ ನೀಡಿ’
‘ಇಂದಿರಾ ಕ್ಯಾಂಟೀನ್‌ಗೆ ರಜೆ ನೀಡಿ’   

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಿಗೆ ಭಾನುವಾರ ರಜೆ ನೀಡಬೇಕು ಎಂದು ಕಾಂಟೀನ್‌ಗಳಲ್ಲಿ ಕೇಟರಿಂಗ್‌ ಸೇವೆ ನೀಡುವ ಶೆಫ್‌ಟಾಕ್‌ ಹಾಗೂ ರೆವಾರ್ಡ್ಸ್‌ ಸಂಸ್ಥೆಗಳು ಬಿಬಿಎಂಪಿಗೆ ಮನವಿ ಸಲ್ಲಿಸಿವೆ.

‘ಭಾನುವಾರ ಕಡಿಮೆ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಅಲ್ಲದೆ, ಕ್ಯಾಂಟೀನ್‌ ಸ್ವಚ್ಛತೆಗಾಗಿ ವಾರಕ್ಕೊಂದು ದಿನ ಸಮಯ ಬೇಕು. ಹಾಗಾಗಿ ಬಿಡುವು ನೀಡಬೇಕು’ ಎಂದು ಮನವಿಯಲ್ಲಿ ಉಲ್ಲೇಖಿಸಿವೆ.

‘ಸಾಮಾನ್ಯವಾಗಿ ಭಾನುವಾರದಂದು ಜನರು ಮನೆಗಳಲ್ಲಿ ಬಾಡೂಟ ಮಾಡಿಕೊಂಡು ಉಣ್ಣುತ್ತಾರೆ. ಇತರೆ ದಿನಗಳಲ್ಲಿ ವಿತರಿಸುವ ಒಟ್ಟು ಆಹಾರದ ಪ್ರಮಾಣಕ್ಕಿಂತ ಅರ್ಧದಷ್ಟು ಆಹಾರವನ್ನು ಭಾನುವಾರ ವಿತರಿಸಿದರೆ ಸಾಕು’ ಎಂದು ಕಗ್ಗದಾಸಪುರದ ನಿವಾಸಿ ಸಿದ್ದುರಾಜು ಸಲಹೆ ನೀಡಿದರು.

ADVERTISEMENT

‘ಪ್ರತಿ ಭಾನುವಾರ ರಜೆ ನೀಡಿದಾಗ ಕ್ಯಾಂಟೀನ್‌ಗಳ ಸ್ವಚ್ಛತೆಯೊಂದಿಗೆ ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬಹುದು’ ಎಂದು ಇಂದಿರಾ ಕ್ಯಾಂಟೀನ್‌ನ ಸಿಬ್ಬಂದಿಯೊಬ್ಬರು ತಿಳಿಸಿದರು.

ಜನದಟ್ಟಣೆಯ ಕ್ಯಾಂಟೀನ್‌ಗಳು: ‘ಸೆಪ್ಟೆಂಬರ್‌ ತಿಂಗಳಿನಲ್ಲಿ ಸುಭಾಷ್‌ನಗರ ಮತ್ತು ಜಯನಗರ ವಾರ್ಡ್‌ಗಳ ಕ್ಯಾಂಟೀನ್‌ಗಳಿಗೆ ಹೆಚ್ಚು ಜನರು ಆಹಾರ ಸೇವಿಸಲು ಬಂದಿದ್ದಾರೆ. ಇಲ್ಲಿ ಪ್ರತಿದಿನ 600 ಜನರಿಗೆ ಉಪಾಹಾರ, ಮಧ್ಯಾಹ್ನದ ಊಟ ಮತ್ತು 400 ಜನರಿಗೆ ರಾತ್ರಿ ಊಟ ವಿತರಿಸುತ್ತಿದ್ದೇವೆ. ಕೆ.ಆರ್‌.ಮಾರುಕಟ್ಟೆಯಲ್ಲಿನ ಕ್ಯಾಂಟೀನ್‌ಗೆ ಊಟಕ್ಕಾಗಿ ಅಂದಾಜು 1,500 ಜನ ಬರುತ್ತಿದ್ದಾರೆ. ಇಲ್ಲಿ ಸದ್ಯ 600 ಜನರಿಗೆ ಊಟ ವಿತರಿಸುತ್ತಿದ್ದೇವೆ. ಅದೂ ಕೂಡ ಕೆಲವೇ ನಿಮಿಷಗಳಲ್ಲಿ ಖಾಲಿ ಆಗುತ್ತಿದೆ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕ್ಯಾಂಟೀನ್‌ನಲ್ಲಿ ಶುಚಿತ್ವ ಮತ್ತು ಗುಣಮಟ್ಟ ಕಾಯ್ದುಕೊಂಡಿದ್ದೇವೆ. ಹಾಗಾಗಿ ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರುವವರು ಕೂಡ ಬಂದು ಊಟ ಮಾಡುತ್ತಿದ್ದಾರೆ. ಕ್ಯಾಂಟೀನ್‌ ಸೌಲಭ್ಯವನ್ನು ಉಳ್ಳವರು ಬಳಸಬಾರದೆಂದು ನಾವು ನಿರ್ಬಂಧ ವಿಧಿಸಿಲ್ಲ’ ಎಂದರು.

**

ಕ್ಯಾಂಟೀನ್‌ಗಳಿಗೆ ಭಾನುವಾರ ರಜೆ ನೀಡಿ ಎಂದು ಕ್ಯಾಟರಿಂಗ್‌ ಸಂಸ್ಥೆಗಳು ಮನವಿ ಮಾಡಿವೆ. ಆ ಕುರಿತು ಇನ್ನೂ ಅಂತಿಮ ತಿರ್ಮಾನ ತೆಗೆದುಕೊಂಡಿಲ್ಲ.
–ಎನ್‌.ಮಂಜುನಾಥ ಪ್ರಸಾದ್‌, ಆಯುಕ್ತ, ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.