ADVERTISEMENT

‘ಇಂದಿರಾ ಕ್ಯಾಂಟೀನ್‌: ಆರೋಪ ರಾಜಕೀಯ ಪ್ರೇರಿತ’

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 20:32 IST
Last Updated 19 ಮಾರ್ಚ್ 2019, 20:32 IST

ಬೆಂಗಳೂರು: ‘ಇಂದಿರಾ ಕ್ಯಾಂಟೀನ್‌ನಲ್ಲಿ ಕೊಡುವ ಆಹಾರದಲ್ಲಿ ವಿಷಕಾರಿ ಅಂಶಗಳಿವೆ ಎನ್ನುವ ಆರೋಪ ಸತ್ಯಕ್ಕೆ ದೂರವಾದದ್ದು ಮತ್ತು ರಾಜಕೀಯ ಪ್ರೇರಿತ’ ಎಂದುಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್‌ನ ಆಹಾರದಲ್ಲಿ ವಿಷಕಾರಿ ಅಂಶಗಳಿವೆ ಎನ್ನುವ ಪಾಲಿಕೆ ಸದಸ್ಯ ಕೆ.ಉಮೇಶ್ ಶೆಟ್ಟಿ ಅವರ ಆರೋಪಕ್ಕೆ ಅವರು ಸ್ಪಷ್ಟೀಕರಣ ನೀಡಿದರು.

‘ಒಂದು ದಿನಕ್ಕೆ ಮೂರು ಲಕ್ಷ ಜನ ಊಟ ಮಾಡುತ್ತಾರೆ. ಆಹಾರ ಸರಿಯಿಲ್ಲ ಎಂದು ಇದುವರೆಗೆ ಯಾರೂ ದೂರಿಲ್ಲ. ಪಾಲಿಕೆ ಕೌನ್ಸಿಲ್‌ ಸಭೆ ನಡೆಸುವಾಗ ಸದಸ್ಯರಿಗೂ ಇಂದಿರಾ ಕ್ಯಾಂಟೀನ್‌ನ ಆಹಾರವನ್ನೇ ಪೂರೈಸುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಈಗ ದಿಢೀರ್‌ ಆರೋಪ ಮಾಡಲಾಗಿದೆ. ಇದರ ಹಿಂದೆ ಬೇರೆ ಉದ್ದೇಶವಿದೆ’ ಎಂದು ಹೇಳಿದರು.

ADVERTISEMENT

‘ಉಮೇಶ್‌ ಶೆಟ್ಟಿಯವರು ಎಲ್ಲಿಂದ ಆಹಾರ ಮಾದರಿ ತೆಗೆದುಕೊಂಡು ಹೋಗಿದ್ದಾರೆ. ಯಾವಾಗ ತೆಗೆದುಕೊಂಡು ಹೋಗಿದ್ದಾರೆ ಎನ್ನುವುದನ್ನು ತಿಳಿಸಿಲ್ಲ. ಸಮಸ್ಯೆಯ ಇದ್ದಿದ್ದೇ ನಿಜವಾದರೆ ಅಧಿಕಾರಿಗಳ ಗಮನಕ್ಕೆ ತಂದಿಲ್ಲ.ಟಿಫಿನ್ ಬಾಕ್ಸ್‌ನಲ್ಲಿ ಮಾದರಿ ತೆಗೆದುಕೊಂಡು ಹೋಗಿದ್ದಾರೆ. ಅದು ಮಾದರಿ ತೆಗೆದುಕೊಂಡು ಹೋಗುವ ವಿಧಾನವೂಅಲ್ಲ’ ಎಂದು ತಿಳಿಸಿದರು.

‘ಮೂರು ದಿನದಿಂದ ಪ್ರತಿದಿನ ಅಡುಗೆ ಮನೆಗಳಿಗೆ ತೆರಳಿ,ಆಹಾರದ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತಿದೆ. ಇನ್ನುಮುಂದೆ ಅಧಿಕಾರಿಗಳುಪ್ರತಿ ತಿಂಗಳು ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪಾಲಿಕೆಯ ದಾಸಪ್ಪ ಆಸ್ಪತ್ರೆಯಲ್ಲಿರುವ ಆಹಾರ ಗುಣಮಟ್ಟ ಪರೀಕ್ಷಾ ಕೇಂದ್ರಕ್ಕೆ ಕಳುಹಿಸುತ್ತಾರೆ.ಕ್ಯಾಂಟೀನ್‌ಗಳಲ್ಲಿ ಸ್ವಚ್ಛತೆ ಕಾಪಾಡದಿದ್ದರೆ, ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ವಿವರಿಸಿದರು.

ಪಾಲಿಕೆ ಸದಸ್ಯ ಮಂಜುನಾಥ್‌ ರೆಡ್ಡಿ,‘ಉಮೇಶ್‌ ಶೆಟ್ಟಿಯವರು ಇಂದಿರಾ ಕ್ಯಾಂಟೀನ್‌ನಲ್ಲಿಯೇ ಆಹಾರ ಮಾದರಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನುವುದಕ್ಕೆ ಆಧಾರವಿಲ್ಲ. ಇದು ಚುನಾವಣೆ ಗಿಮಿಕ್‌ ಆಗಿದೆ. ಆರೋಪ ಸುಳ್ಳು ಎಂದಾದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.