ADVERTISEMENT

ಇಂದಿರಾ ಗಾಂಧಿ ಭಾವಚಿತ್ರ ಮರೆಮಾಚಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 19:46 IST
Last Updated 2 ಏಪ್ರಿಲ್ 2018, 19:46 IST

ಬೆಂಗಳೂರು: ದಾಸರಹಳ್ಳಿ ವಲಯದ ಮಲ್ಲಸಂದ್ರ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ನಲ್ಲಿನ ಇಂದಿರಾ ಭಾವಚಿತ್ರವನ್ನು ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಪಾಲಿಕೆಯು ಪೀಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ.

‘ಬಿಬಿಎಂಪಿ ಅಧಿಕಾರಿಗಳು ಇಂದಿರಾ ಭಾವಚಿತ್ರ ಮರೆಮಾಚಿಲ್ಲ. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದಾಗ ಈ ಕೃತ್ಯವನ್ನು ಪಾಲಿಕೆಗೆ ಸಂಬಂಧಿಸದವರು ನಡೆಸಿದ್ದಾರೆ ಎಂಬುದು ಮನದಟ್ಟಾಗಿದೆ. ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚುವಂತೆ ಪೊಲೀಸರನ್ನು ಕೋರಿದ್ದೇವೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ, ನಿಧನರಾಗಿರುವ ನಾಯಕರ ಭಾವಚಿತ್ರವನ್ನು ತೆರವುಗೊಳಿಸುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

ಇಂದಿರಾ ಭಾವಚಿತ್ರವನ್ನು ಪೇಪರ್‌ ಶೀಟ್‌ಗಳ ಮೂಲಕ ಮರೆಮಾಚಿರುವ ಕುರಿತು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಸೋಮವಾರ ವರದಿ ಪ್ರಕಟಗೊಂಡಿತ್ತು.

ಮದ್ಯ ಸಾಗಿಸುತ್ತಿದ್ದ ವ್ಯಕ್ತಿ ಸೆರೆ: ನ್ಯಾಯಾಂಗ ಬಡಾವಣೆಯಲ್ಲಿ ಮದ್ಯ ಸಾಗಿಸುತ್ತಿದ್ದ ಆರೋ‍ಪದ ಮೇರೆಗೆ ಯಲಹಂಕ ನಿವಾಸಿ ಕಿರಣ್‌ ಕುಮಾರ್‌ ಅವರನ್ನು ಚುನಾವಣಾಧಿಕಾರಿಗಳು ಬಂಧಿಸಿದ್ದಾರೆ.

ಕಿರಣ್‌ ಅವರು 24 ಮದ್ಯದ ಬಾಟಲಿಗಳನ್ನು (750 ಎಂ.ಎಲ್‌) ಸಾಗಿಸುತ್ತಿದ್ದರು. ಸೇನಾಪಡೆಯ ಸಿಬ್ಬಂದಿಗೆ ಪೂರೈಸುವ ಈ ಮದ್ಯದ ಬೆಲೆ ₹ 1.5 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಬೆಂಗಳೂರು ಉತ್ತರ ಉಪವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಬಿಡಿಎ ಕುಂದುಕೊರತೆ ಸಭೆ ರದ್ದು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಪ್ರತಿ ಬುಧವಾರ ಆಯೋಜಿಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಚುನಾವಣಾ ನೀತಿ ಸಂಹಿತೆ ಕಾರಣದಿಂದ ರದ್ದುಗೊಳಿಸಲಾಗಿದೆ.

‘ಚುನಾವಣಾ ಪ್ರಕ್ರಿಯೆಗಳು ಮುಗಿಯುವವರೆಗೂ ಕುಂದುಕೊರತೆ ಸಭೆ ನಡೆಯುವುದಿಲ್ಲ., ಸಾರ್ವಜನಿಕರು ಪ್ರತಿದಿನ ಮಧ್ಯಾಹ್ನ 3ರಿಂದ 5.30ರವರೆಗೆ ಪ್ರಾಧಿಕಾರದ ಕೇಂದ್ರ ಕಚೇರಿಗೆ ಬಂದು ಅಹವಾಲು ಸಲ್ಲಿಸಬಹುದು’ ಎಂದು ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.