ADVERTISEMENT

ಇಂದು ಕರಗ: ಸಂಚಾರ ವ್ಯವಸ್ಥೆ ಬದಲು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 19:31 IST
Last Updated 23 ಏಪ್ರಿಲ್ 2013, 19:31 IST

ಬೆಂಗಳೂರು:  ನಗರದ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ಬುಧವಾರ (ಏ.24) ಕರಗ ಉತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಬುಧವಾರ ಸಂಜೆ ನಾಲ್ಕು ಗಂಟೆಯಿಂದ ಗುರುವಾರ ಮಧ್ಯಾಹ್ನ ಎರಡು ಗಂಟೆವರೆಗೆ ಧರ್ಮರಾಯಸ್ವಾಮಿ ದೇವಸ್ಥಾನದ ಅಕ್ಕಪಕ್ಕದ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ವಾಹನ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರಗ ಉತ್ಸವ ಸಾಗುವ ಪೈಲ್ವಾನ್ ಕೃಷ್ಣಪ್ಪ ಲೇನ್, ಒಟಿಸಿ ರಸ್ತೆ, ನಗರ್ತಪೇಟೆ ಮುಖ್ಯರಸ್ತೆ, ಅವಿನ್ಯೂ ರಸ್ತೆಯಲ್ಲಿ ಸಿಟಿ ಮಾರುಕಟ್ಟೆ ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಈ ಭಾಗದಲ್ಲಿ ಸಂಚರಿಸಬೇಕಾದ ವಾಹನಗಳು ಎಸ್.ಜೆ.ಪಿ.ರಸ್ತೆ, ಪುರಭವನ, ಕೆಂಪೇಗೌಡ ರಸ್ತೆ ಮಾರ್ಗವಾಗಿ ಹೋಗಬೇಕು.

ಎ.ಎಸ್.ಆಚಾರ್ ರಸ್ತೆಯಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆಗೆ ಹೋಗುವ ವಾಹನಗಳು ಮೈಸೂರು ರಸ್ತೆಯಲ್ಲಿ ಬಲಕ್ಕೆ ತಿರುಗಿ ಬ್ರಿಯಾಂಡ್ ವೃತ್ತ, ರಾಯನ್ ವೃತ್ತದ ಮಾರ್ಗವಾಗಿ ಸಂಚರಿಸಬೇಕು. ಮೈಸೂರು ರಸ್ತೆಯಿಂದ ಬರುವ ವಾಹನಗಳು ಬ್ರಿಯಾಂಡ್ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ರಾಯನ್ ವೃತ್ತ, ವೈದ್ಯಕೀಯ ಕಾಲೇಜು ವೃತ್ತ, ಪ್ರೊ.ಶಿವಶಂಕರರಾವ್ ವೃತ್ತ, ಜೆ.ಸಿ.ರಸ್ತೆ ಮೂಲಕ ಮುಂದೆ ಸಾಗಬೇಕು. ವೈದ್ಯಕೀಯ ಕಾಲೇಜು ವೃತ್ತದಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆಗೆ ಹೋಗುವ ವಾಹನಗಳು ಪ್ರೊ.ಶಿವಶಂಕರರಾವ್ ವೃತ್ತದ ಮೂಲಕ ಜೆ.ಸಿ.ರಸ್ತೆಗೆ ಬರಬೇಕು.

ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ಸಂಚರಿಸುವ ವಾಹನಗಳು ಶಾಂತಲಾ ವೃತ್ತದಿಂದ ದೇವರಾಜ ಅರಸು ವೃತ್ತ (ಖೋಡೆ ವೃತ್ತ), ವಾಟಾಳ್ ನಾಗರಾಜ ರಸ್ತೆ, ಮೈಸೂರು ಡೀವಿಯೇಷನ್ ರಸ್ತೆ, ಬಿನ್ನಿಮಿಲ್ ರಸ್ತೆ ಮೂಲಕ ಮೈಸೂರು ರಸ್ತೆಗೆ ಹೋಗಬೇಕು. ಡಾ.ಟಿ.ಸಿ.ಎಂ ರಾಯನ್ ರಸ್ತೆ ಜಂಕ್ಷನ್‌ನಿಂದ ಕಾಟನ್‌ಪೇಟೆ ಮುಖ್ಯರಸ್ತೆ ಕಡೆಗೆ ಸಂಚರಿಸಲು ಅವಕಾಶವಿಲ್ಲ. ಬದಲಿಗೆ ಡಾ.ಟಿ.ಸಿ.ಎಂ ರಾಯನ್ ರಸ್ತೆಯಿಂದ ಶಾಂತಲಾ ವೃತ್ತಕ್ಕೆ ಬಂದು ಮುಂದೆ ಸಾಗಬಹುದು. ಬಿವಿಕೆ ಅಯ್ಯಂಗಾರ್ ರಸ್ತೆಯಿಂದ ಬರುವ ವಾಹನಗಳು ಚಿಕ್ಕಪೇಟೆ ವೃತ್ತದಲ್ಲಿ ಬಲ ತಿರುವು ಪಡೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.

ಕರಗ ಉತ್ಸವವು ಕಾಶಿ ವಿಶ್ವನಾಥ ದೇವಸ್ಥಾನದಿಂದ ಬಳೆಪೇಟೆ ಮುಖ್ಯರಸ್ತೆ, ಸುಬೇದಾರ್ ಛತ್ರ ರಸ್ತೆ ಮೂಲಕ ಅಣ್ಣಮ್ಮದೇವಿ ದೇವಸ್ಥಾನಕ್ಕೆ ಬಂದು ಕಿಲಾರಿ ರಸ್ತೆಗೆ ಹೋಗುವ ಸಂದರ್ಭದಲ್ಲಿ ಮೈಸೂರು ಬ್ಯಾಂಕ್ ವೃತ್ತ ಮತ್ತು ಸಾಗರ್ ಜಂಕ್ಷನ್‌ನಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಉತ್ಸವ ಮುಂದೆ ಸಾಗಿದ ನಂತರ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಆನಂದರಾವ್ ವೃತ್ತ ಮತ್ತು ಸಂಗಮ್ ಗಲ್ಲಿ ಕಡೆಯಿಂದ ಕೆಂಪೇಗೌಡ ವೃತ್ತದ ಕಡೆಗೆ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಈ ಭಾಗದಲ್ಲಿ ಸಂಚರಿಸಬೇಕಾದ ವಾಹನಗಳು ವೈ.ರಾಮಚಂದ್ರ ರಸ್ತೆ ಮಾರ್ಗವಾಗಿ ಸಾಗಬೇಕು. ಸಾಗರ್ ಜಂಕ್ಷನ್‌ನಿಂದ ಬಿ.ವಿ.ಕೆ ಅಯ್ಯಂಗಾರ್ ರಸ್ತೆ ಕಡೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬದಲಿಗೆ ಕೆ.ಜಿ.ರಸ್ತೆ, ಎಲ್.ಟಿ.ಪಿ ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.

ವಾಹನ ನಿಲುಗಡೆ: ಕರಗ ಉತ್ಸವಕ್ಕೆ ಬರುವ ಸಾರ್ವಜನಿಕರು ಮತ್ತು ಭಕ್ತರ ವಾಹನಗಳ ನಿಲುಗಡೆಗೆ ಜೆ.ಸಿ.ರಸ್ತೆಯ ಬಿಬಿಎಂಪಿ ವಾಹನ ನಿಲುಗಡೆ ಸಮುಚ್ಚಯ, ಕೆ.ಜಿ.ರಸ್ತೆಯ ಕೆಂಪೇಗೌಡ ಮಹಾರಾಜ ಪಾರ್ಕಿಂಗ್ ಕಾಂಪ್ಲೆಕ್ಸ್, ಮಾಮೂಲ್ ಪೇಟೆ ಮುಖ್ಯರಸ್ತೆಯ ಕೆಂಪೇಗೌಡ ಪಾರ್ಕಿಂಗ್ ಕಾಂಪ್ಲೆಕ್ಸ್ ಮತ್ತು ಕೆಂಪೇಗೌಡ ಬಸ್ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.