ADVERTISEMENT

ಇತಿಹಾಸದ ಪುಟ ಸೇರಲಿದೆ ಬಾದಾಮಿ ಹೌಸ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST
ಬಾದಾಮಿ ಹೌಸ್ –ಪ್ರಜಾವಾಣಿ ಚಿತ್ರ
ಬಾದಾಮಿ ಹೌಸ್ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಡ್ಸನ್‌ ವೃತ್ತದ ಬಳಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಸುಂದರ ಕಲ್ಲಿನ ಕಟ್ಟಡ ‘ಬಾದಾಮಿ ಹೌಸ್‌’ ಇತಿಹಾಸ ಪುಟಗಳಲ್ಲಿ ಸೇರುವ ಕಾಲ ಸನ್ನಿಹಿತವಾಗಿದೆ.

ಹೌದು, ಹಳೆಯ ಬೆಂಗಳೂರಿನ ವಾಸ್ತುವೈಭವದ ಕುರುಹಾಗಿದ್ದ ಈ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ತಲೆ ಎತ್ತಲಿದೆ. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಈ ಕಟ್ಟಡದ ಹಿಂಭಾಗವನ್ನು ಒಡೆಯುವ ಕಾರ್ಯ ಆರಂಭವಾಗಿದೆ.

ಅನೇಕ ವರ್ಷಗಳಿಂದ ರಾಜ್ಯ ಸರ್ಕಾರ ಮತ್ತು ಕಟ್ಟಡ ಮಾಲೀಕರ ನಡುವೆ ನಡೆಯುತ್ತಿದ್ದ ಕಾನೂನು ಸಮರ ಅಂತ್ಯಗೊಂಡಿದ್ದು, ಕಟ್ಟಡ ಮಾಲೀಕರ ಪರವಾಗಿ ತೀರ್ಪು ಬಂದಿದೆ.

ADVERTISEMENT

ಇಲ್ಲಿದ್ದ ಎಸ್‌ಬಿಐ ಶಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ವಾರ್ತಾ ಇಲಾಖೆಯ ಸಿನಿಮಾ ವಿಭಾಗ ಹಾಗೂ ಚಲನಚಿತ್ರ ಅಕಾಡೆಮಿಯ ಕಚೇರಿಯನ್ನು ತೆರವು ಮಾಡುವಂತೆ ಕಟ್ಟಡ ಮಾಲೀಕರು ಸೂಚನೆ ನೀಡಿದ್ದಾರೆ. ಬ್ಯಾಂಕ್‌ ಶಾಖೆ, ಪ್ರವಾಸೋದ್ಯಮ ನಿಗಮದ ಕಚೇರಿಯನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ.

ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ‘ಅಕಾಡೆಮಿಯನ್ನು ಸ್ಥಳಾಂತರ ಮಾಡಬೇಕು ಎಂದು ಕಟ್ಟಡ ಮಾಲೀಕರು ಸೂಚಿಸಿದ್ದಾರೆ. ಇದರ ಮಾಲೀಕರು ಮುಂಬೈನವರು. ಇಲ್ಲಿ ಹೊಸ ಕಟ್ಟಡ ನಿರ್ಮಿಸುವ ಯೋಜನೆ ಹೊಂದಿರುವ ಅವರು ಈ ಕಟ್ಟಡ ಒಡೆಯುತ್ತಿದ್ದಾರೆ’ ಎಂದರು.

‘ನಂದಿನಿ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಅಮೃತ ಮಹೋತ್ಸವ ಕಟ್ಟಡಕ್ಕೆ ಅಕಾಡೆಮಿಯ ಕಚೇರಿಯನ್ನು ಸ್ಥಳಾಂತರಿಸಲು 2015ರಲ್ಲೇ ನಿಶ್ಚಯಿಸಲಾಗಿತ್ತು. ಅದು ಪೂರ್ಣಗೊಳ್ಳಲು ಇನ್ನೂ ಸಮಯ ಬೇಕು. ಆದರೆ, ಬಾದಾಮಿ ಹೌಸ್‌ನಿಂದ ತುರ್ತಾಗಿ ತೆರವು ಮಾಡಬೇಕಿರುವುದರಿಂದ ಕಚೇರಿ ನಿರ್ವಹಣೆಗೆ ಬೇಕಾಗುವಷ್ಟು ಕಟ್ಟಡವನ್ನು ಅಲ್ಲಿ ಸಿದ್ಧಪಡಿಸಿಕೊಳ್ಳುತ್ತಿದ್ದೇವೆ. ಈ ತಿಂಗಳಲ್ಲಿ ಸ್ಥಳಾಂತರಿಸುತ್ತೇವೆ’ ಎಂದು ತಿಳಿಸಿದರು.

‘2006ರಲ್ಲಿ ಚಲನಚಿತ್ರ ಅಕಾಡೆಮಿ ಇಲ್ಲಿ ಪ್ರಾರಂಭಗೊಂಡಿತು. ನಂತರ ಬಾದಾಮಿ ಹೌಸ್‌ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮಾ ಉತ್ಸವದ ಕೇಂದ್ರವಾಯಿತು’ ಎಂದು ಮಾಹಿತಿ ನೀಡಿದರು.

ಪ್ರೀಮಿಯರ್ ಶೋ ನಡೆಯುತ್ತಿದ್ದ ಏಕೈಕ ಚಿತ್ರಮಂದಿರ: ‘80ರ ದಶಕದಲ್ಲಿ ಬಾದಾಮಿ ಹೌಸ್‌ನಲ್ಲಿದ್ದ ಪ್ರಿಯದರ್ಶಿನಿ ಚಿತ್ರಮಂದಿರದಲ್ಲಿ ಮಾತ್ರ ಪ್ರೀಮಿಯರ್ ಶೋಗೆ ಅವಕಾಶ ಇತ್ತು. ರಾಜ್‌ಕುಮಾರ್‌ ಅವರು ಅನೇಕ ಸಿನಿಮಾಗಳ ಪ್ರೀಮಿಯರ್‌ ಶೋಗಳನ್ನು ಇಲ್ಲಿ ವೀಕ್ಷಿಸಿದ್ದಾರೆ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಎಚ್.ಬಿ. ದಿನೇಶ್ ನೆನಪಿಸಿಕೊಂಡರು.

ಬಾದಾಮಿ ಹೌಸ್‌ ಇತಿಹಾಸ: ‘ಬ್ರಿಟೀಷರ ಕಾಲದಲ್ಲಿ ಜಾರ್ಜ್‌ ಓಕ್ಸ್‌ ಕಂಪೆನಿಯು ಕೈಗಾರಿಕಾ ಉಪಕರಣಗಳ ಮಾರಾಟಕ್ಕೆ ವಸಾಹತುಶಾಹಿ ಪ್ರದೇಶಗಳಲ್ಲಿ ಕಟ್ಟಡ ನಿರ್ಮಿಸಿತು. ಆಗ ನಿರ್ಮಿಸಿದ ಕಟ್ಟಡವಿದು. ಇದಕ್ಕೆ ಜಾರ್ಜ್‌ ಓಕ್ಸ್‌ ಎಂಬ ಹೆಸರೂ ಇತ್ತು. ಈಗಲೂ ಕಟ್ಟಡದ ಮೇಲೆ ಈ ಹೆಸರನ್ನು ಕಾಣಬಹುದು’ ಎಂದು ಸಿನಿಮಾ ತಜ್ಞ ಜಗನ್ನಾಥ ಪ್ರಕಾಶ್‌ ಮಾಹಿತಿ ನೀಡಿದರು.

‘ನಂತರ ಅಮೆರಿಕ ಮತ್ತು ಬ್ರಿಟಿಷ್‌ ರಾಯಭಾರ ಕಚೇರಿ ಇಲ್ಲಿ ಪ್ರಾರಂಭವಾಯಿತು. ನಂತರ ಸರ್ವೋತ್ತಮ ಬಾದಾಮಿ (ಮೊದಲ ವಾಕ್ಚಿತ್ರ ‘ಆಲಂ ಆರಾ’ದಲ್ಲಿ ಧ್ವನಿ ಸಂಕಲನಕಾರರಾಗಿ ಕೆಲಸ ಮಾಡಿದ್ದರು) ಕುಟುಂಬದವರು ಜಾರ್ಜ್‌ ಓಕ್ಸ್ ಕಂಪೆನಿಯಿಂದ ಈ ಕಟ್ಟಡವನ್ನು ಖರೀದಿಸಿದರು.’

‘ಸ್ವಾತಂತ್ರ್ಯ ನಂತರ ಬಾದಾಮಿ ಕುಟುಂಬದವರು ಕಟ್ಟಡವನ್ನು ಬಕ್ಸ್‌ ರಂಕಾ ಡೆವಲಪರ್ಸ್‌ ಅವರಿಗೆ ಮಾರಾಟ ಮಾಡಿದರು. 1970ರ ದಶಕದಲ್ಲಿ ಸರ್ಕಾರ ಅದನ್ನು ವಶಕ್ಕೆ ಪಡೆಯಿತು. ಎಂ.ಡಿ.ಮರಿಪುಟ್ಟಣ್ಣ ಅವರು ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾದಾಗ ಅಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪ್ರಾರಂಭಿಸಿದರು.’

‘ಕನ್ನಡ ಸಿನಿಮಾಗಳಿಗೆ ಸಬ್ಸಿಡಿ ನೀಡಲು ಪ್ರತ್ಯೇಕ ಸಿನಿಮಾ ಘಟಕ ಸ್ಥಾಪನೆಯಾಯಿತು. 77ರಲ್ಲಿ ಈ ಘಟಕ ವಾರ್ತಾ ಇಲಾಖೆಯೊಂದಿಗೆ ಸೇರಿಕೊಂಡಿತು. ಪ್ರಮಾಣಪತ್ರ ನೀಡುವ ಮುನ್ನ ಸಿನಿಮಾ ವೀಕ್ಷಿಸಲು, ಪ್ರಶಸ್ತಿಗೆ ಹಾಗೂ ಸಬ್ಸಿಡಿಗೆ ಸಿನಿಮಾ ಆಯ್ಕೆ ಮಾಡುವ ಮುನ್ನ ಅವುಗಳನ್ನು ವೀಕ್ಷಿಸಲು ಇಲ್ಲಿ ಸುಸಜ್ಜಿತ ಚಿತ್ರಮಂದಿರ ನಿರ್ಮಿಸಿದರು. ಅದೇ ಪ್ರಿಯದರ್ಶಿನಿ ಚಿತ್ರಮಂದಿರ’ ಎಂದು ವಿವರಿಸಿದರು.

ಐದು ದಶಕಗಳ ಸಿನಿಮಾ ನಂಟು
‘ಪ್ರಶಸ್ತಿ ವಿಜೇತ, ಕಲಾತ್ಮಕ ಸಿನಿಮಾಗಳನ್ನು ಈ ಕಟ್ಟಡದಲ್ಲಿ ಸಂಗ್ರಹಿಸಿಡಲಾಗುತ್ತಿತ್ತು. 2011ರಲ್ಲಿ ಚಲನಚಿತ್ರ ಅಕಾಡೆಮಿ ಪ್ರಾರಂಭವಾಯಿತು. ಸುಮಾರು 5 ದಶಕಗಳಿಂದಲೂ ಬಾದಾಮಿ ಹೌಸ್‌ಗೂ ಸಿನಿಮಾಕ್ಕೂ ನಂಟು ಇದೆ’ ಎಂದು ಜಗನ್ನಾಥ್‌ ಸ್ಮರಿಸಿಕೊಂಡರು.

‘ಇವತ್ತಿಗೂ ಈ ಕಟ್ಟಡ ಅನೇಕ ಸಿನಿಮಾ ಚಟುವಟಿಕೆ ತಾಣವಾಗಿದೆ. ಎಂ.ಎಸ್‌. ಸತ್ಯು, ಪಿ. ಲಂಕೇಶ್‌, ಶ್ಯಾಂ ಬೆನಗಲ್‌, ಗಿರೀಶ ಕಾರ್ನಾಡ ಅವರಂತಹ ಮಹನೀಯರು ಕಲಾತ್ಮಕ ಸಿನಿಮಾ ವೀಕ್ಷಿಸಲು ಇಲ್ಲಿಗೆ ಬರುತ್ತಿದ್ದರು. 100 ವರ್ಷಗಳಿಗಿಂತ ಹಳೆಯ ಕಟ್ಟಡವಾಗಿದ್ದರೂ ಇದು ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಸೇರಿಲ್ಲ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಬಾದಾಮಿ ಹೌಸ್‌ ಖರೀದಿಗೆ ಶಿಫಾರಸು
ವಾಟಾಳ್‌ ನಾಗರಾಜ್‌ ಅವರು ವಿಧಾನ ಮಂಡಲದ ವಿಷಯ ಸಮಿತಿ ಅಧ್ಯಕ್ಷರಾಗಿದ್ದಾಗ ಬಾದಾಮಿ ಹೌಸ್‌ಗೆ ಭೇಟಿ ನೀಡಿದ್ದರು. ಈ ಕಟ್ಟಡವನ್ನು ರಾಜ್ಯ ಸರ್ಕಾರ ಖರೀದಿಸಬೇಕು ಎಂದು ಶಿಫಾರಸು ಮಾಡಿದ್ದರು. ಆದರೆ, ಸರ್ಕಾರ ಇದನ್ನು ಖರೀದಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.