ADVERTISEMENT

ಇನ್ನು ಹಳ್ಳಿಗಳಿಗೂ ತಲುಪಲಿದೆ ‘ಮಿಡಿ’ ಬಸ್‌

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:45 IST
Last Updated 16 ಸೆಪ್ಟೆಂಬರ್ 2013, 19:45 IST

ಬೆಂಗಳೂರು: ನಗರಕ್ಕೆ ಹೊಂದಿಕೊಂಡ ಹಳ್ಳಿಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸಲು ಶೀಘ್ರ ‘ಮಿಡಿ’ ಬಸ್‌ಗಳನ್ನು (ಮಧ್ಯಮ ಗಾತ್ರ) ಆರಂಭಿಸುವ ಉದ್ದೇಶ ವಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ತಿಳಿಸಿದರು.

ಹೊಸೂರು ರಸ್ತೆಯಲ್ಲಿ ಸಂಚರಿಸುವ ‘ಬಿಗ್‌–ಟ್ರಂಕ್‌’ ಬಸ್‌ ಸೇವೆಗೆ ವಿಧಾನ ಸೌಧ ಮುಂಭಾಗ ಚಾಲನೆ ನೀಡುವ ಕಾರ್ಯಕ್ರಮದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಆರಂಭದಲ್ಲಿ 50 ‘ಮಿಡಿ’ ಬಸ್‌ಗಳನ್ನು ಓಡಿಸಲಾಗುತ್ತದೆ. ಇದಕ್ಕಾಗಿ ₨10 ಕೋಟಿ ವೆಚ್ಚವಾಗಲಿದೆ.  9.5 ಮೀಟರ್‌ ಉದ್ದದ ಈ ಬಸ್‌ಗಳು ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸ ಲಿವೆ. ಮುಂದೆ ಇವುಗಳ ಸಂಖ್ಯೆಯನ್ನು 600ಕ್ಕೆ ಹೆಚ್ಚಿಸಲಾಗುವುದು. ‘ಬಿಗ್‌ ಟ್ರಂಕ್‌’  ಸಂಚರಿಸುವ ಮಾರ್ಗದಿಂದ ಈ ಬಸ್‌ಗಳು ನಗರದ ಸರಹದ್ದು ಮತ್ತು ಗ್ರಾಮಗಳ ನಡುವೆ ಸಂಚರಿಸಲಿವೆ ಎಂದು ತಿಳಿಸಿದರು.

ಪ್ರಸ್ತುತ 2400 ಮಾರ್ಗಗಳಲ್ಲಿ 6605 ಬಸ್‌ಗಳ ಸೌಲಭ್ಯವನ್ನು ಬಿಎಂಟಿಸಿ ಕಲ್ಪಿಸಿದೆ. ನಗರದಲ್ಲಿ ಸಾರಿಗೆ ಸಂಚಾರವನ್ನು ಮತ್ತಷ್ಟು ಬಲಗೊಳಿಸಲು ಇಂಟಲಿಜೆಂಟ್‌ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್‌ (ಐಟಿಎಸ್‌) ಯೋಜನೆಯನ್ನು ಸುಮಾರು ₨ 70 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

ಒಟ್ಟು 200 ವೋಲ್ವೋ ಬಸ್‌ಗಳಲ್ಲಿ ‘ಎಲ್‌ಇಡಿ’ ಸ್ಕ್ರೀನ್‌ಗಳನ್ನು ಅಳವಡಿಸಲು ಟೆಂಡರ್‌ ಕರೆಯಲಾಗಿದೆ ಹಾಗೂ ಉಚಿತ ವೈ–ಫೈ ಇಂಟರ್‌ನೆಟ್‌ ಸೇವೆ ಅಳವಡಿಸಲಾಗುತ್ತಿದೆ ಎಂದು ವಿವರಿಸಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗೃಹ ಸಚಿವ ಕೆ.ಜೆ. ಜಾರ್ಜ್‌, ಆಹಾರ ಸಚಿವ ದಿನೇಶ್‌ ಗುಂಡೂರಾವ್‌, ಶಾಸಕ ರೋಷನ್‌ ಬೇಗ್‌, ಬಿಬಿಎಂಪಿ ಮಹಾಪೌರ ಬಿ.ಎಸ್‌. ಸತ್ಯನಾರಾಯಣ ಹಾಜರಿದ್ದರು.

‘ಬಿಗ್‌ ಟ್ರಂಕ್‌’ ಬಸ್‌ ಸೌಲಭ್ಯ ಹೇಗೆ?
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವತಿಯಿಂದ 62 ಹೊಸ ‘ಬಿಗ್‌ಟ್ರಂಕ್‌’ ಬಸ್‌ಗಳನ್ನು ಸೋಮವಾರದಿಂದ ಹೊಸೂರು ರಸ್ತೆಯಲ್ಲಿ ಆರಂಭಿಸಲಾಗಿದ್ದು, ಪ್ರತಿದಿನ ಒಟ್ಟು 450 ಟ್ರಿಪ್‌ಗಳ ಸಾರಿಗೆ ಸೌಲಭ್ಯ ಕಲ್ಪಿಸಲಿವೆ.

ರಾಷ್ಟ್ರೀಯ ಹೆದ್ದಾರಿ–7ರಲ್ಲಿರುವ ಪ್ರಮುಖ ಸ್ಥಳಗಳಾದ ಅತ್ತಿಬೆಲೆ, ಚಂದಾಪುರ ಮತ್ತು ಎಲೆಕ್ಟ್ರಾನಿಕ್‌ ಸಿಟಿಯಿಂದ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ‘ಬಿಗ್‌ ಟ್ರಂಕ್‌’ ಸೇವೆಗಳನ್ನು ಕಲ್ಪಿಸಲಾಗಿದೆ.

ಅತ್ತಿಬೆಲೆಯಿಂದ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ 44 ಬಸ್‌ಗಳು, ಚಂದಾ ಪುರರಿಂದ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ 8 ಬಸ್‌ಗಳು ಮತ್ತು ಎಲೆಕ್ಟ್ರಾನಿಕ್‌ ಸಿಟಿಯಿಂದ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ 10 ಬಸ್‌ಗಳು ಪ್ರತಿ 2ರಿಂದ 3 ನಿಮಿಷಗಳ ಅಂತರದಲ್ಲಿ ಬೆಳಿಗ್ಗೆ 3.45ರಿಂದ ರಾತ್ರಿ 11.45ರವರೆಗೆ ಬಿಗ್‌–ಟ್ರಂಕ್‌ ಸೇವೆ ದೊರೆಯಲಿದೆ.

ಹೊಸ ವ್ಯವಸ್ಥೆಯಲ್ಲಿ ಮುಖ್ಯ ರಸ್ತೆಯಲ್ಲಿರುವ ಪ್ರಮುಖ ಸ್ಥಳಗಳನ್ನು ಸಂಚಾರ ಹಬ್‌ಗಳೆಂದು ಗುರುತಿಸ ಲಾಗಿದೆ. ಇಂತಹ ಸ್ಥಳಗಳಿಂದ ಬೆಂಗಳೂರು ನಗರದ ಪ್ರಮುಖ ನಿಲ್ದಾಣಗಳಿಗೆ ಪ್ರತಿ 2ರಿಂದ 3 ನಿಮಿಷ ಕ್ಕೆ ಒಂದು ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.