ADVERTISEMENT

ಇನ್‌ಸ್ಪೆಕ್ಟರ್‌ ಕೆನ್ನೆಗೆ ಹೊಡೆದ ಟೆಕಿಗಳು ಸೆರೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2017, 20:07 IST
Last Updated 9 ಏಪ್ರಿಲ್ 2017, 20:07 IST
ಬೆಂಗಳೂರು: ದೊಡ್ಡನೆಕ್ಕುಂದಿ ಜಂಕ್ಷನ್‌ನಲ್ಲಿ ಭಾನುವಾರ ನಸುಕಿನ ವೇಳೆ ವಾಹನಗಳ ತಪಾಸಣೆ ಮಾಡುತ್ತಿದ್ದ ಏರ್‌ಪೋರ್ಟ್ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಮೊಹಮದ್ ಅವರ ಕೆನ್ನೆಗೆ ಹೊಡೆದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.
 
ಬಿಹಾರದ ಅಲೋಕ್‌ (30) ಹಾಗೂ ಪಿಯಾಂಶು ಕುಮಾರ್ (29) ಎಂಬುವರನ್ನು ಬಂಧಿಸಲಾಗಿದೆ. ದೊಡ್ಡನೆಕ್ಕುಂದಿಯಲ್ಲಿ ನೆಲೆಸಿದ್ದ ಇವರಿಬ್ಬರೂ, ಸಿ.ವಿ ರಾಮನ್‌ನಗರದ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. 
 
‘ಶನಿವಾರ ರಾತ್ರಿ ಮೊಹಮದ್ ಹಾಗೂ ಸಿಬ್ಬಂದಿ ದೊಡ್ಡನೆಕ್ಕುಂದಿ ಮುಖ್ಯರಸ್ತೆಯಲ್ಲಿ ಪಾನಮತ್ತ ಚಾಲಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದರು. ಸಮೀಪದ ಜಂಕ್ಷನ್‌ನಲ್ಲಿ ಯಾರೋ ಅಪರಿಚಿತರು ಮಾರಕಾಸ್ತ್ರ ಹಿಡಿದು ಓಡಾಡುತ್ತಿರುವ ಬಗ್ಗೆ 2.45ರ ಸುಮಾರಿಗೆ ನಿಯಂತ್ರಣ ಕೊಠಡಿಗೆ ಮಾಹಿತಿ ಬಂತು. ಅಲ್ಲಿನ ಸಿಬ್ಬಂದಿ ಕೂಡಲೇ ವಾಕಿಟಾಕಿ ಮೂಲಕ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು’ ಎಂದು ಅಧಿಕಾರಿಯೊಬ್ಬರು ಹೇಳಿದರು.
 
‘ಕೂಡಲೇ ಮಹದೇವಪುರ ಠಾಣೆ ಇನ್‌ಸ್ಪೆಕ್ಟರ್ ಸ್ಥಳಕ್ಕೆ ತೆರಳಿದ್ದಾರೆ. ಹತ್ತಿರದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಮೊಹಮದ್ ಕೂಡ ಹೋಗಿದ್ದಾರೆ. ಆದರೆ, ಅಲ್ಲಿ ಅಂಥ ಯಾವುದೇ ವ್ಯಕ್ತಿಗಳು ಕಂಡಿಲ್ಲ.’
 
‘ಇನ್ನೇನು ವಾಪಸ್ ಹೊರಡಬೇಕು ಎನ್ನವುಷ್ಟರಲ್ಲಿ ಮೊಹಮದ್ ಅವರ ಹತ್ತಿರ ಓಡಿ ಬಂದ ಒಬ್ಬಾತ, ‘ಯಾರೋ ಇಬ್ಬರು ಯುವಕರು ನನ್ನಿಂದ ಬೈಕ್ ಕಿತ್ತುಕೊಂಡು ಪರಾರಿಯಾದರು’ ಎಂದು ದೂರಿದ್ದಾನೆ. ಬೈಕ್‌ನ ನೋಂದಣಿ ಸಂಖ್ಯೆ ಪಡೆದ ಅವರು, ಕೂಡಲೇ ನಿಯಂತ್ರಣ ಕೊಠಡಿ ಮೂಲಕ ಆ ರಸ್ತೆಯಲ್ಲಿರುವ ಎಲ್ಲ ಸಿಬ್ಬಂದಿಗೂ ವಿಷಯ ತಿಳಿಸಿದ್ದರು.’
 
‘ಇದೇ ವೇಳೆಗೆ ಅಲೋಕ್ ಬೈಕ್ ಓಡಿಸಿಕೊಂಡು ಆ ಮಾರ್ಗವಾಗಿ  ಬಂದಿದ್ದಾರೆ. ಪೊಲೀಸರನ್ನು ನೋಡುತ್ತಿದ್ದಂತೆಯೇ ಪರಾರಿಯಾಗಲು ಯತ್ನಿಸಿದ ಅವರನ್ನು ಸಿಬ್ಬಂದಿ ಓಡಿ ಹೋಗಿ ಹಿಡಿದುಕೊಂಡಿದ್ದಾರೆ’ ಎಂದು ಅವರು ವಿವರಿಸಿದರು. 
 
ಗೆಜೆಟೆಡ್ ಅಧಿಕಾರಿ ಮಗ: ವಾಹನದ ದಾಖಲೆ ಕೇಳಿದಾಗ, ‘ಯಾವಾಗಲೂ ಬೈಕ್‌ನಲ್ಲಿ ಇಟ್ಟುಕೊಂಡೇ ಓಡಾಡಬೇಕೇ’ ಎಂದು ಅಲೋಕ್ ಕೂಗಾಡಿದ್ದರು. ಆಲ್ಕೋಮೀಟರ್‌ನಿಂದ ತಪಾಸಣೆ ಮಾಡಿದಾಗ ಅವರು ಪಾನಮತ್ತರಾಗಿರುವುದು ಗೊತ್ತಾಯಿತು.

ಆಗ ಇನ್‌ಸ್ಪೆಕ್ಟರ್, ‘ಕುಡಿದಿರುವ ಕಾರಣ ನಿನಗೆ ಬೈಕ್ ಕೊಡುವುದಿಲ್ಲ. ಯಾರನ್ನಾದರೂ ಕರೆಸಿಕೊಂಡು ವಾಹನ ತೆಗೆದುಕೊಂಡು ಹೋಗು’ ಎಂದಿದ್ದರು. ಆಗ ಅವರು ಸ್ನೇಹಿತ ಪ್ರಿಯಾಂಶುಗೆ ಕರೆ ಮಾಡಿದ್ದರು ಎನ್ನಲಾಗಿದೆ.
 
ಸ್ಥಳಕ್ಕೆ ಬಂದ ಪ್ರಿಯಾಂಶು, ಸಿಬ್ಬಂದಿ ಜತೆ ಗಲಾಟೆ ಪ್ರಾರಂಭಿಸಿದ್ದಾರೆ. ‘ನಾನು ಬಿಹಾರದ ಗೆಜೆಟೆಡ್ ಅಧಿಕಾರಿಯ ಮಗ. ಅಲೋಕ್‌ನ ತಂದೆ ಕೂಡ ಅಲ್ಲಿ ಪೊಲೀಸ್ ಅಧಿಕಾರಿ. ನಮ್ಮ ವಿರುದ್ಧವೇ ಪ್ರಕರಣ ದಾಖಲಿಸುತ್ತೀರಾ’ ಎಂದಿದ್ದಾರೆ.
 
ಆಗ ಮೊಹಮದ್, ‘ಯಾರೇ ಆದರೂ, ದಾಖಲೆ ತೋರಿಸಿದೆ ಬೈಕ್ ಬಿಡುವುದಿಲ್ಲ’ ಎಂದಿದ್ದಾರೆ. ಇದರಿಂದ ಕುಪಿತಗೊಂಡ ಪ್ರಿಯಾಂಶು, ಅವರ ಕೆನ್ನೆಗೆ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ. 
 
ನ್ಯಾಯಾಂಗ ಬಂಧನ
‘ಕಪಾಳಕ್ಕೆ ಹೊಡೆಯುತ್ತಿದ್ದಂತೆಯೇ ಇತರೆ ಸಿಬ್ಬಂದಿ ಆರೋಪಿಗಳನ್ನು ಹಿಡಿದು ಮಹದೇವಪುರ ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ. ಹಲ್ಲೆ (323) ಹಾಗೂ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ (353) ಆರೋಪಗಳಡಿ ಪ್ರಕರಣ ದಾಖಲಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.