ADVERTISEMENT

ಇನ್‌ಸ್ಪೆಕ್ಟರ್ ರತ್ನಾಕರ ಶೆಟ್ಟಿ ಅಮಾನತು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:40 IST
Last Updated 8 ಸೆಪ್ಟೆಂಬರ್ 2011, 19:40 IST

ಬೆಂಗಳೂರು: ಲಂಚಕ್ಕೆ ಒತ್ತಾಯಿಸಿ, ಲೋಕಾಯುಕ್ತ ಪೊಲೀಸರ ದಾಳಿಯಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಅಮೃತಹಳ್ಳಿ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ರತ್ನಾಕರ ಶೆಟ್ಟಿ ಮತ್ತು ಕಾನ್‌ಸ್ಟೆಬಲ್ ಸುಹೇಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ನಗರ ಪೊಲೀಸ್ ಕಮಿಷನರ್ ಕೆ.ಜ್ಯೋತಿಪ್ರಕಾಶ್ ಮಿರ್ಜಿ ಆದೇಶ ಹೊರಡಿಸಿದ್ದಾರೆ.

ಇಬ್ಬರೂ ಆರೋಪಿಗಳು ಶಿವಾಜಿನಗರದ ಹೊಲಿಗೆ ಯಂತ್ರದ ಅಂಗಡಿ ಮಾಲೀಕ ನೂರ್ ಅಹ್ಮದ್ ಎಂಬುವರಿಂದ ಐದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸುವ ಸುಳಿವು ಲಭ್ಯವಾದ ಹಿನ್ನೆಲೆಯಲ್ಲಿ ಇಬ್ಬರೂ ಠಾಣೆಯಿಂದ ಪರಾರಿಯಾಗಿದ್ದರು. ಒಂದು ದಿನದ ಬಳಿಕವೂ ಕರ್ತವ್ಯಕ್ಕೆ ಮರಳದ ಕಾರಣದಿಂದ ಗುರುವಾರ ಇಬ್ಬರನ್ನೂ ಅಮಾನತು ಮಾಡಲಾಗಿದೆ.

ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗುರುವಾರ ಅಮೃತಹಳ್ಳಿ ಠಾಣೆಯ ಕೆಲಸಿಬ್ಬಂದಿಗಳನ್ನು ಲೋಕಾಯುಕ್ತ ಕಚೇರಿಗೆ ಕರೆಸಿಕೊಂಡ ತನಿಖಾಧಿಕಾರಿಗಳು, ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.