ADVERTISEMENT

ಇಬ್ಬರು ಜೈಲು ಅಧೀಕ್ಷಕರ ಅಮಾನತು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಬೆಂಗಳೂರು: ಅಧಿಕೃತವಾಗಿ ಜಾಮೀನು ಸಿಗದಿದ್ದರೂ ಕುಖ್ಯಾತ ಕ್ರಿಮಿನಲ್ ಸೈಯದ್ ಮಸೂದ್ ಎಂಬಾತನನ್ನು ಬಿಡುಗಡೆ ಮಾಡಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ಟಿ.ಎಚ್. ಲಕ್ಷ್ಮೀನಾರಾಯಣ ಮತ್ತು ಸಹಾಯಕ ಅಧೀಕ್ಷಕಿ ಡಾ. ಅನಿತಾ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಮಸೂದ್ ವಿರುದ್ಧ ದೇಶದ ವಿವಿಧೆಡೆ 65ಕ್ಕೂ ಹೆಚ್ಚು ಮೊಕದ್ದಮೆಗಳು ದಾಖಲಾಗಿವೆ. ಇಷ್ಟೂ ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದಾನೆ. ವಂಚನೆ, ವಿದೇಶಿ ವಿನಿಮಯಕ್ಕೆ ಸಂಬಂಧಿಸಿದ ಅಕ್ರಮಗಳಲ್ಲಿ ಈತ ಭಾಗಿಯಾಗಿದ್ದಾನೆ.
 
ಡಿಸೆಂಬರ್‌ನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಪುರದ ಜೈಲಿನಿಂದ ಈತನನ್ನು ನಗರಕ್ಕೆ ಕರೆತರಲಾಗಿತ್ತು. ಆ ಸಂದರ್ಭದಲ್ಲಿ ಕೋರ್ಟ್ ವಿಚಾರಣೆ ನಂತರ ಆತನನ್ನು ಪುನಃ ವಾಪಸ್ ಜೈಪುರಕ್ಕೆ ಕರೆದುಕೊಂಡು ಹೋಗಿ ಬಿಡಬೇಕಿತ್ತು. ಹಾಗೆ ಮಾಡದೆ ನಗರದ ಜೈಲಿನಲ್ಲೇ ಈ ಅಧಿಕಾರಿಗಳು ಇಟ್ಟುಕೊಂಡಿದ್ದರು. ಇದೇ ಸಂದರ್ಭದಲ್ಲಿ ಮುಂಬೈ ಮೂಲದ ವಕೀಲರೊಬ್ಬರು ಈತನಿಗೆ 35 ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದೆ ಎಂದು ಜೈಲು ಅಧಿಕಾರಿಗಳಿಗೆ ಫ್ಯಾಕ್ಸ್ ಮೂಲಕ ಮಾಹಿತಿ ನೀಡಿದರು.

ಫ್ಯಾಕ್ಸ್ ಪ್ರತಿ ಆಧಾರದ ಮೇಲೆಯೇ ಮಸೂದ್‌ನನ್ನು ಈ ಅಧಿಕಾರಿಗಳು ಜೈಲಿನಿಂದ ಬಿಡುಗಡೆ ಮಾಡಿದ್ದರು. ಬಳಿಕ ಆತ ವಿದೇಶಕ್ಕೆ ಹೋಗಿದ್ದಾನೆ. ಅದರ ನಂತರ ಜೈಪುರ ನ್ಯಾಯಾಲಯದಿಂದ ಆತನಿಗಾಗಿ ವಾರೆಂಟ್ ತಂದಿದ್ದು, ಆ ಸಂದರ್ಭದಲ್ಲಿ ಪರಿಶೀಲಿಸಿದಾಗ ಆತನಿಗೆ ಜಾಮೀನು ಮಂಜೂರಾಗಿರಲಿಲ್ಲ ಎಂಬುದು ಗೊತ್ತಾಗಿದೆ.

ಈ ವಿಷಯ ಗೊತ್ತಾದ ತಕ್ಷಣವೇ ವಿಚಾರಣೆ ಸಲುವಾಗಿ ಡಿಐಜಿ (ಕಾರಾಗೃಹ) ಎಸ್.ರವಿ ಅವರನ್ನು ನೇಮಿಸಲಾಗಿತ್ತು. ಅವರು ಕೊಟ್ಟ ವರದಿಯಲ್ಲಿ ಈ ಇಬ್ಬರೂ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಬಂದಿಖಾನೆ ಸಚಿವ ಎ.ನಾರಾಯಣಸ್ವಾಮಿ ಅವರು ಅಧಿಕಾರಿಗಳ ಅಮಾನತಿಗೆ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.