ADVERTISEMENT

ಇಬ್ರಾಹಿಂ ಪುತ್ರನ ವಿರುದ್ಧ ತನಿಖೆ: ತ್ವರಿತಕ್ಕೆ ಹೈಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 20:05 IST
Last Updated 24 ಫೆಬ್ರುವರಿ 2011, 20:05 IST

ಬೆಂಗಳೂರು: ದಾಸ್ತಾನು ಮಳಿಗೆಯೊಂದರ ಮೇಲೆ ದಾಂದಲೆ ನಡೆಸಿರುವ ಆರೋಪ ಹೊತ್ತ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರ ಪುತ್ರ ಸಿ.ಎಂ. ಫಯಾಜ್ ಅವರ ವಿರುದ್ಧದ ತನಿಖೆಯನ್ನು ತ್ವರಿತಗೊಳಿಸುವಂತೆ ಹೈಕೋರ್ಟ್ ಗುರುವಾರ ಪೊಲೀಸರಿಗೆ ಆದೇಶಿಸಿದೆ.

ಹೈಕೋರ್ಟ್ ಆದೇಶದ ಹೊರತಾಗಿಯೂ ಫಯಾಜ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳದ ಪೊಲೀಸರನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ತೀವ್ರ ತರಾಟೆಗೆ ತೆಗೆದುಕೊಂಡರು. ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ, ಅಂದು ತೆಗೆದುಕೊಂಡ ಕ್ರಮಗಳ ಮಾಹಿತಿ ನೀಡುವಂತೆ ನಿರ್ದೇಶಿಸಿದ್ದಾರೆ.

ಫಯಾಜ್ ಅವರ ವಿರುದ್ಧ ನಗರದ ಆವಲಹಳ್ಳಿ ಸಮೀಪದ ನಿಂಬೇಕಾಯಿಪುರ ಗ್ರಾಮದಲ್ಲಿನ ಸುಭೀಕ್ಷಾ ಟ್ರೇಡಿಂಗ್ ಲಿಮಿಟೆಡ್‌ನ ಮಾಲೀಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.

ತಾವು ನಡೆಸುತ್ತಿರುವ ಮಳಿಗೆಯ ಜಾಗವು ಫಯಾಜ್ ಹಾಗೂ ಅವರ ತಾಯಿ ಶಹೀಲಾ ಅವರಿಂದ ಗುತ್ತಿಗೆಗೆ ಪಡೆಯಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಇದೇ 24ರಂದು ಏಕಾಏಕಿಯಾಗಿ ಫಯಾಜ್ ಸುಮಾರು 20 ಮಂದಿಯನ್ನು ಕರೆದುಕೊಂಡು ದಾಂದಲೆ ನಡೆಸಿದ್ದಾರೆ. ಸಲಕರಣೆಗಳನ್ನು ಧ್ವಂಸಗೊಳಿಸಿದ್ದಾರೆ. ಆದರೆ ಅವರು ಮಾಜಿ ಸಚಿವರ ಪುತ್ರ ಆಗಿರುವ ಕಾರಣ ಪೊಲೀಸರು ಹಾಗೂ ಇತರ ಅಧಿಕಾರಿಗಳು ಈ ಬಗ್ಗೆ ಮೌನ ತಾಳಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲು ಮಾಡುವಂತೆ ಹಾಗೂ ತಮಗೆ ಪೊಲೀಸ್ ರಕ್ಷಣೆ ನೀಡಲು ಆದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ಡಿನೋಟಿಫೈ: ಮಾಹಿತಿಗೆ ಆದೇಶ
ಬೆಂಗಳೂರಿನ ಅಗರದ ಬಳಿ 1.35 ಎಕರೆ ಜಮೀನಿನ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಹೈಕೋರ್ಟ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಗುರುವಾರ ಹೆಚ್ಚಿನ ಮಾಹಿತಿ ಬಯಸಿದೆ.

2010ರ ಆಗಸ್ಟ್  26ರಂದು ನಡೆದ ಡಿನೋಟಿಫಿಕೇಷನ್ ಪ್ರಶ್ನಿಸಿ ಶ್ರೀನಿವಾಸ ರೆಡ್ಡಿ ಎನ್ನುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.

ಎಚ್‌ಎಸ್‌ಆರ್ ಲೇಔಟ್ ನಿರ್ಮಾಣಕ್ಕೆ ಪ್ರಾಧಿಕಾರವು ಇದನ್ನು 1985-86ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಇಷ್ಟು ವರ್ಷಗಳವರೆಗೆ ಅದು ಪ್ರಾಧಿಕಾರದ ಬಳಿಯೇ ಇತ್ತು.ಆದರೆ ಸರ್ಕಾರ ಈಗ ಕೆಲವೊಂದು ಖಾಸಗಿ ವ್ಯಕ್ತಿಗಳ ಹಿತಾಸಕ್ತಿಗಾಗಿ ಅದನ್ನು ಸ್ವಾಧೀನ ಪ್ರಕ್ರಿಯೆಯಿಂದ ಏಕಾಏಕಿ ಕೈಬಿಟ್ಟಿದೆ (ಡಿನೋಟಿಫೈ ಮಾಡಲಾಗಿದೆ) ಎಂದು ಅರ್ಜಿದಾರರು ದೂರಿದ್ದಾರೆ. ವಿಚಾರಣೆಯನ್ನು ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT